ಸಿನಿವಾಣಿ

ಹೋಳಿ ಹಬ್ಬದಂದು ಪಬ್​ನಲ್ಲಿ ಯುವಕರು ಮಾಡಿದ ಎಡವಟ್ಟು ಇಂಟರ್ನೆಟ್​ ಸೆಲೆಬ್ರಿಟಿಯ ಪ್ರಾಣ ಕಸಿಯಿತಾ?

ಹೈದರಾಬಾದ್​: ಇಂಟರ್ನೆಟ್​ ಸೆಲೆಬ್ರಿಟಿ ಹಾಗೂ ನಟಿ ಡಾಲಿ ಡಿಕ್ರೂಜ್​ ಅವರು ಶುಕ್ರವಾರ (ಮಾ.18) ರಾತ್ರಿ ಹೈದರಾಬಾದ್​ನ ಗಾಚಿಬೌಲಿ ಬಳಿಯ ಎಲ್ಲಾ ಹೋಟೆಲ್​ ಬಳಿ ನಡೆದ ಭಿಕರ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಡಾಲಿ ಡಿಕ್ರೂಜ್​ ಅವರು ಗಾಯತ್ರಿ ಎಂಬ ಹೆಸರಿನಿಂದಲೂ ಚಿರಪರಿಚಿತರಾಗಿದ್ದರು.

ಹೋಳಿ ಹಬ್ಬದ ಆಚರಣೆ ಮುಗಿಸಿಕೊಂಡು ಗಾಚಿಬೌಲಿಯಿಂದ ವಿಪ್ರೋ ಜಂಕ್ಸನ್​​ ಕಡೆಗೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಪುಟ್​ಪಾತ್​ ಮೇಲೆ ಹಾರಿ ಪಲ್ಟಿಯಾಗಿ ದುರ್ಘಟನೆ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ ಗಾಯತ್ರಿ ಮತ್ತು ಹತ್ತಿರದ ಎಲ್ಲಾ ಹೋಟೆಲ್‌ನಲ್ಲಿ ತೋಟಗಾರಿಕೆ ಕೆಲಸ ಮಾಡುತ್ತಿದ್ದ ಮಹಿಳೆಗೂ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ರೋಹಿತ್​ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅನೇಕ ಸಂಗತಿಗಳು ತಿಳಿದುಬಂದಿದೆ. ಮಾರ್ಚ್​ 18ರ ಹೋಳಿ ಹಬ್ಬದಂದು ರೋಹಿತ್​, ಗಾಯತ್ರಿ ಮನೆಗೆ ತೆರಳಿ ಆಕೆಯನ್ನು ಪ್ರಿಸ್ಮ್​ ಪಬ್​ಗೆ ಕರೆದೊಯ್ದ. ಇಬ್ಬರು ಪಾರ್ಟಿ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ.

ಅಪಘಾತಕ್ಕೂ ಮುನ್ನ ಪಬ್​ನಲ್ಲಿದ್ದ ಯುವಕರು ಎಳೆನೀರಿನಲ್ಲಿ ಮದ್ಯ ಮಿಶ್ರಣ ಮಾಡಿ ಗಾಯತ್ರಿ ಮತ್ತು ರೋಹಿತ್​ಗೆ ಕೊಟ್ಟಿದ್ದರು ಎಂದು ತಿಳಿದುಬಂದಿದೆ. ಹೋಳಿ ಹಬ್ಬದ ಹಿಂದಿನ ದಿನವೇ ಯುವಕರು ಮದ್ಯ ಖರೀದಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಹೋಳಿ ಹಬ್ಬದಂದು ಮದ್ಯ ಸೇವನೆಗೆ ಅನುಮತಿ ಇಲ್ಲ. ಹೀಗಾಗಿ ಎಳನೀರಿನಲ್ಲಿ ಮಿಶ್ರಣ ಮಾಡಿದ್ದರು. ಇದೇ ಕಾರಣದಿಂದ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸ್​ ತನಿಖೆಯ ವೇಳೆ ತಿಳಿದುಬಂದಿದೆ. (ಏಜೆನ್ಸೀಸ್​)