ಸಿನಿವಾಣಿ

ಇಷ್ಟು ದಿನ ಶ್ರುತಿ ಹಾಸನ್​ ಮುಚ್ಚಿಟ್ಟಿದ್ದ ರಹಸ್ಯವನ್ನು ಬಹಿರಂಗಪಡಿಸಿದ ಬಾಯ್​ಫ್ರೆಂಡ್​ ಶಂತನು!

ಚೆನ್ನೈ: ಸಕಲಕಲಾವಲ್ಲಭ ಕಮಲ್​ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್​, ಗ್ಲಾಮರ್​ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಇನ್ನು ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸುದ್ದಿಯಾಗಿದ್ದಾರೆ. ಎರಡು ವರ್ಷ ಡೇಟಿಂಗ್​ ಮಾಡಿ ಬಾಯ್​ಪ್ರೆಂಡ್​ ಮೈಕಲ್​ ಕೊರ್ಸಲೆ ಜತೆ ಬ್ರೇಕಪ್​ ಮಾಡಿಕೊಂಡಿದ್ದರು. ಇದೀಗ ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಶ್ರುತಿ, ಶಂತನು ಹಜಾರಿಕಾ ಜತೆ ಡೇಟಿಂಗ್​ ಮಾಡುತ್ತಿದ್ದಾರೆ. ಇದೀಗ ಇಬ್ಬರ ಬಗೆಗಿನ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

ಮಾಧ್ಯಮವೊಂದರಲ್ಲಿ ಮಾತನಾಡಿರುವ ಶ್ರುತಿ ಬಾಯ್​ಫ್ರೆಂಡ್​ ಶಂತನು, ನಾವಿಬ್ಬರು ಈಗಾಗಲೇ ಮದುವೆಯಾಗಿದ್ದೇವೆ. ಇಬ್ಬರು ಸೃಜನಾತ್ಮಕವಾಗಿ ವಿವಾಹವಾಗಿದ್ದೇವೆ. ಈ ವಿವಾಹ ನಮ್ಮಿಬ್ಬರ ನಡುವಿನ ಬಂಧ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ತೋರಿಸುತ್ತದೆ. ನಾವಿಬ್ಬರು ಸೃಜನಾತ್ಮಕ ವ್ಯಕ್ತಿಗಳು. ಇಬ್ಬರು ಸೃಜನಾತ್ಮಕ ಕೆಲಸಗಳನ್ನು ಒಟ್ಟಿಗೆ ಮಾಡುತ್ತೇವೆ. ಇದೇ ನಮಗೆ ತುಂಬಾ ಮುಖ್ಯ. ಮದವೆ ಅಂತಾ ಬಂದಾಗ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಕಾಲ ಹೇಗೆ ನಡೆಯುತ್ತವೆ ಎಂದು ನೋಡೋಣ ಎಂದಿದ್ದಾರೆ.

ಶಂತನುಗೆ ಶ್ರುತಿ ತುಂಬಾ ಸ್ಫೂರ್ತಿ ನೀಡುತ್ತಾರಂತೆ. ಪರಸ್ಪರ ಸ್ಫೂರ್ತಿದಾಯಕ ಜೋಡಿ ಎಂದು ಕರೆದುಕೊಳ್ಳುತ್ತಾರಂತೆ. ಪ್ರತಿದಿನ ಇಬ್ಬರು ವಿವಿಧ ಐಡಿಯಾಗಳೊಂದಿಗೆ ಬರುತ್ತೇವೆ. ನಮ್ಮ ಐಡಿಯಾಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತೇವೆ. ನಮ್ಮಿಬ್ಬರ ಬಂಧ ಗಟ್ಟಿಯಾಗಿದೆ ಎಂದು ತಿಳಿಸಿದ್ದಾರೆ.

ಶಂತನುಗೂ ಮುಂಚೆ ಶ್ರುತಿ ಮೈಕಲ್​ ಕೊರ್ಸಲೆ ಜತೆ ಎರಡು ವರ್ಷ ಪರಸ್ಪರ ಡೇಟಿಂಗ್ ನಡೆಸಿದ್ದರು. ಶ್ರುತಿ ಮತ್ತು ಮೈಕಲ್​ 2016ರಲ್ಲಿ ತಮ್ಮ ಸಂಬಂಧವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಅಲ್ಲದೆ, ಹಾಗಾಗ ಶ್ರುತಿ ಹಾಸನ್​ ಲಾಸ್​ ಏಂಜಲೀಸ್​ಗೆ ಹೋಗಿ ಬರುತ್ತಿದ್ದರು.​ ಮೈಕಲ್​ ಕೂಡ ಶ್ರುತಿ ಗುಂಗಿನಲ್ಲಿ ಪದೇ ಪದೆ ಭಾರತಕ್ಕೆ ಬಂದು ಹೋಗುತ್ತಿದ್ದರು. ಆದರೆ, 2019ರ ಏಪ್ರಿಲ್​ನಲ್ಲಿ ತಮ್ಮ ಸಂಬಂಧಕ್ಕೆ ಇಬ್ಬರು ಕೊನೆಯಾಡಿದ್ದರು.

ಇದಾದ ಬಳಿಕ ಶ್ರುತಿ ಕೆಲ ಕಾಲ ಖಿನ್ನತೆಗೆ ಜಾರಿದ್ದರು. ಬಳಿಕ ಖಿನ್ನತೆಯಿಂದ ಗುಣವಾದ ಶ್ರುತಿ ಸಿನಿಮಾ ಕೆಲಸಗಳಲ್ಲಿ ಬಿಜಿಯಾದರೂ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ಮತ್ತಷ್ಟು ಖ್ಯಾತಿಯನ್ನು ಗಿಟ್ಟಿಸಿಕೊಂಡರು. ಇದರ ನಡುವೆ ಶಂತನು ಪರಿಚಯವಾಗಿ, ಇಬ್ಬರ ಪರಿಚಯ ಪ್ರೀತಿಗೆ ತಿರುಗಿ, ಇದೀಗ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಶ್ರುತಿ ಕೊನೆಯದಾಗಿ ವಕೀಲ್​ ಸಾಬ್​ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್​ ಖ್ಯಾತಿಯ ಪ್ರಶಾಂತ್​ ನೀಲ್​ ನಿರ್ದೇಶನದ ಪ್ರಭಾಸ್​ ನಟನೆಯ ಸಲಾರ್ ಚಿತ್ರದಲ್ಲಿ ಶ್ರುತಿ ನಾಯಕಿಯಾಗಿದ್ದಾರೆ. ಚಿತ್ರವೂ 2022ರ ಏಪ್ರಿಲ್​ನಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)​