ಸಿನಿವಾಣಿ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್​ ಸೇತುಪತಿಗೆ ಸಮನ್ಸ್​ ನೀಡಿದ ಕೋರ್ಟ್​

ಚೆನ್ನೈ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್​ 2ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ತಮಿಳು ನಟ ವಿಜಯ್​ ಸೇತುಪತಿಗೆ ಚೆನ್ನೈನ ಮೆಟ್ರೋಪಾಲಿಟನ್​ ಕೋರ್ಟ್​ ಸಮನ್ಸ್​ ನೀಡಿದೆ.

ವಿಮಾನ ನಿಲ್ದಾಣದಲ್ಲಿ ನಟ ಸೇತುಪತಿ ಅವಹೇಳನಕಾರಿ ಮತ್ತು ವ್ಯಂಗ್ಯದ ಕಾಮೆಂಟ್​ ಮಾಡಿದರು ಎಂದು ದೂರುದಾರ ಮಹಾ ಗಾಂಧಿ ಚೆನ್ನೈನ ಸೈದಪೇಟ್​ನಲ್ಲಿರುವ ಮೆಟ್ರೋಪಾಲಿಟನ್​​ ಜುಡಿಶಿಯಲ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಸೇತುಪತಿ ಮಾತ್ರವಲ್ಲದೆ, ಅವರೊಂದಿಗೆ ಇದ್ದ ಜಾನ್ಸನ್​ ಎಂಬುವರ ಮೇಲೆಯೂ ದೂರು ದಾಖಲಾಗಿದೆ. ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂದು ದೂರಿದ್ದಾರೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್​ 200ನೇ ಸೆಕ್ಸನ್​ ಅಡಿಯಲ್ಲಿ ಸೇತುಪತಿಗೆ ಸಮನ್ಸ್​ ನೀಡಿದ್ದು, 2022ರ ಜನವರಿ 2ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.

ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ಮಹಾ ಗಾಂಧಿ, ಬೆಂಗಳೂರು ವಿಮಾನ ನಿಲ್ದಾಣದ ಲಗೇಜ್​ ಕೌಂಟರ್​ ಬಳಿ ನ.2ರಂದು ಸೇತುಪತಿ ಅವರನ್ನು ಭೇಟಿ ಮಾಡಿದೆ. ಆಗಷ್ಟೇ ತಾನೇ ಸೇತುಪತಿ ಅವರು ಸೂಪರ್​ ಡಿಲಕ್ಸ್​ ಚಿತ್ರದಲ್ಲಿ ಶಿಲ್ಪಾ ಪಾತ್ರದಲ್ಲಿ ನಟಿಸಿದ್ದಕ್ಕಾಗಿ ಉತ್ತಮ ಪೋಷಕ ನಟ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದರು. ಅದಕ್ಕಾಗಿ ನಾನು ಅವರಿಗೆ ಶುಭಕೋರಿದೆ. ಆದರೆ, ಸಾರ್ವಜನಿಕರ ಎದುರಲ್ಲೇ ಅವಹೇಳನಕಾರಿ ಹೇಳಿಕೆ ನೀಡಿ, ವ್ಯಂಗ್ಯವಾಡಿದರು.

ಇದಾದ ಬಳಿಕ ಸೇತುಪತಿಗೆ ಎಚ್ಚರಿಕೆ ನೀಡಿ ವಿಮಾನ ನಿಲ್ದಾಣದಿಂದ ಹೊರಗೆ ಬರುವಾಗ ಸೇತುಪತಿ ಸೂಚನೆಯಂತೆ ಜಾನ್ಸನ್​ ಎಂಬುವರು ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದರು. ಅಲ್ಲದೆ, ಕೊಲೆ ಬೆದರಿಕೆ ಸಹ ಹಾಕಿದರು ಎಂದು ಮಹಾಗಾಂಧಿ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದ್ದಾರೆ.

ಮಹಾಗಾಂಧಿ ಅವರು ಚೆನ್ನೈ ತಲುಪಿದಾಗ, ವಿಮಾನ ನಿಲ್ದಾಣದ ಜಗಳದ ಬಗ್ಗೆ ವಿಜಯ್ ಸೇತುಪತಿ ನೀಡಿದ ಸಂದರ್ಶನದ ಬಗ್ಗೆ ತಿಳಿದುಕೊಂಡರು. ಅದರಲ್ಲಿ ಸೇತುಪತಿ ಅವರು ಕುಡಿದ ಮತ್ತಿನಲ್ಲಿ ತಮ್ಮ ಮೇಲೆ ದಾಳಿ ಮಾಡಿದ ವ್ಯಕ್ತಿಯ ಹೆಸರು ಮಹಾಗಾಂಧಿ ಎಂದು ಹೇಳಿದ್ದರು. ಇದೀಗ ಪ್ರಕರಣ ಸಂಬಂಧ ಸೇತುಪತಿಗೆ ಕೋರ್ಟ್​ ಸಮನ್ಸ್​ ನೀಡಿದ್ದು, ವಿಚಾರಣೆಗೆ ಎದುರಾಗುತ್ತಾರಾ ಎಂದು ಕಾಯ್ದು ನೋಡಬೇಕಿದೆ. (ಏಜೆನ್ಸೀಸ್​)