ಸಿನಿವಾಣಿ

ಪುಷ್ಪ-2 ಆರಂಭಕ್ಕೂ ಮುನ್ನವೇ ನಟಿ ರಶ್ಮಿಕಾ ಮಂದಣ್ಣಗೆ ಬಿಗ್​ ಶಾಕ್​ ಕೊಟ್ಟ ನಿರ್ದೇಶಕ ಸುಕುಮಾರ್​!

ಹೈದರಾಬಾದ್​: ಟಾಲಿವುಡ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ಪುಷ್ಪ-ದಿ ರೈಸ್​ ಮೊದಲ ಭಾಗದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ನಟಿ ರಶ್ಮಿಕಾ ಮಂದಣ್ಣ, ಲಕ್ಷಾಂತರ ಸಿನಿ ಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ. ಸಿನಿಮಾ ಕೂಡ ಹಿಟ್​ ಆಗಿದೆ. ಇದೀಗ ಪುಷ್ಪ ಸಿನಿಮಾದ ಎರಡನೇ ಭಾಗದ ಮೇಲೆ ಎಲ್ಲರ ನಿರೀಕ್ಷೆ ಇದೆ. ಅದಕ್ಕೂ ಮುನ್ನವೇ ರಶ್ಮಿಕಾ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡುವ ಸುದ್ದಿಯೊಂದು ಹೊರಬಿದ್ದಿದೆ.

ಪುಷ್ಪ ಸಿನಿಮಾದ ಎರಡನೇ ಭಾಗದಲ್ಲಿ ರಶ್ಮಿಕಾ ಪಾತ್ರವನ್ನು ಮೊಟಕುಗೊಳಿಸಲು ನಿರ್ದೇಶಕ ಸುಕುಮಾರ್​ ನಿರ್ಧರಿಸಿದ್ದಾರೆಂದು ವರದಿಗಳು ತಿಳಿಸಿವೆ. ಎರಡನೇ ಭಾಗದ ಮುಖ್ಯ ಕಥಾವಸ್ತುವಿಗೆ ರಶ್ಮಿಕಾ ಪಾತ್ರ ಸೂಕ್ತವಲ್ಲವಂತೆ. ಹೀಗಾಗಿ ಸುಕುಮಾರ್​ ಮತ್ತು ಅವರ ತಂಡ ಶ್ರೀವಲ್ಲಿ ಪಾತ್ರಕ್ಕೆ ಕತ್ತರಿ ಹಾಕಲಿದೆ.

ಮೂಲಗಳ ಪ್ರಕಾರ ಎರಡನೇ ಭಾಗದಲ್ಲಿ ಅಲ್ಲು ಅರ್ಜುನ್​ ಅಲಿಯಾಸ್​ ಪುಷ್ಪರಾಜ್​ ಕತೆ ಬಹುತೇಕ ಕಾಡಿನಲ್ಲೇ ನಡೆಯುತ್ತದೆ. ಕೆಲವು ಶ್ರೀಗಂಧದ ಕಳ್ಳಸಾಗಣೆ ವ್ಯವಹಾರಗಳನ್ನು ಮಾಡಲು ಆಗ್ನೇಯ ಏಷ್ಯಾದ ದೇಶಗಳಿಗೂ ಪುಷ್ಪರಾಜ್​ ಪ್ರಯಾಣಿಸಬಹುದು. ನಟಿ ರಶ್ಮಿಕಾರನ್ನು ದಾಳವಾಗಿಸಿಕೊಂಡು ಪುಷ್ಪರಾಜ್​ನ್ನು ಪೊಲೀಸ್​ ತಂಡ ಬಲೆಗೆ ಬೀಳಿಸಬಹುದು. ಈ ಪ್ರಕ್ರಿಯೆಯಲ್ಲಿ ರಶ್ಮಿಕಾ ಸಾಯಬಹುದು. ಆಕೆಯ ಸಾವಿನ ಬಳಿಕ ಪವರ್​ಫುಲ್​ ಕ್ಲೈಮ್ಯಾಕ್ಸ್​ ಸೃಷ್ಟಿಯಾಗಬಹುದು ಎನ್ನಲಾಗುತ್ತಿದೆ.

ಮುಂದಿನ ಭಾಗದಲ್ಲಿ ಫಾಹದ್ ಫಾಸಿಲ್ ಮತ್ತು ಅನಸೂಯಾ ಭಾರದ್ವಾಜ್ ಕೂಡ ಪೂರ್ಣ ಪ್ರಮಾಣದ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಈ ಬಿಗ್ ಬಜೆಟ್ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣ ಮಾಡುತ್ತಿದೆ. ಎಲ್ಲವೂ ಯೋಜಿಸಿದಂತೆ ನಡೆದರೆ ಈ ವರ್ಷದ ಅಂತ್ಯದ ವೇಳೆಗೆ ಮುಂದಿನ ಭಾಗ ಬಿಡುಗಡೆಯಾಗುವ ಸಾಧ್ಯತೆ ಇದೆ.

ಟಾಲಿವುಡ್​ ಚಿತ್ರರಂಗದ ಮೂಲಗಳ ಪ್ರಕಾರ ಅಲ್ಲು ಅರ್ಜುನ್ ತಮ್ಮ ಮುಂದಿನ ಚಿತ್ರಕ್ಕಾಗಿ ಲೋಕೇಶ್ ಕನಕರಾಜ್ ಜೊತೆಗೂಡಲು ಯೋಜಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)