ಸಿನಿವಾಣಿ

ಅಂದು ರಾಜ್ಯದಲ್ಲಿ ನಡೆದ ಘಟನೆಗೆ ಪ್ರತಿಯಾಗಿ ಯಶ್​ ಮೇಲೆ ಸೇಡು ತೀರಿಸಿಕೊಳ್ತೇ ತೆಲುಗು ಮೀಡಿಯಾ!

ಹೈದರಾಬಾದ್​: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ನಾಳೆ ದೇಶಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರತಂಡ ಕೊನೆಯ ಹಂತದವರೆಗೂ ಪ್ರಚಾರದಲ್ಲಿ ಬಿಜಿಯಾಗಿದೆ. ಇದರ ನಡುವೆ ತೆಲುಗು ಮಾಧ್ಯಮಗಳು ರಾಕಿಭಾಯ್ ವಿರುದ್ಧ ಸೇಡು ತೀರಿಸಿಕೊಂಡಿವೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ತೆಲುಗು ಮಾಧ್ಯಮಗಳಿಗೆ ರಾಕಿಭಾಯ್​ ಏನು ಮಾಡಿದರು? ಯಾಕೆ ಸೇಡು ತೀರಿಸಿಕೊಂಡರು? ಯಶ್​ ಮಾಡಿದ ತಪ್ಪಾದರೂ ಏನು? ಎಂಬುದನ್ನು ತಿಳಿಯುವ ಮುನ್ನ ಒಂದು ಸಣ್ಣ ಫ್ಲ್ಯಾಶ್​ ಬ್ಯಾಕ್​ ಓದಿ ಬಿಡಿ.

ನಟ ಅಲ್ಲು ಅರ್ಜುನ್​ ನಟನೆಯ ಪುಷ್ಪ ದಿ ರೈಸ್​ ಸಿನಿಮಾ ಕಳೆದ ವರ್ಷ ಡಿಸೆಂಬರ್​ನಲ್ಲಿ ತೆರೆಕಂಡಿತು. ಇದು ಕೂಡ ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದರಿಂದ ಚಿತ್ರತಂಡ ಎಲ್ಲ ಭಾಷೆಗಳಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಹೀಗೆ ಕರ್ನಾಟಕದಲ್ಲೂ ಪತ್ರಿಕಾಗೋಷ್ಠಿ ನಡೆಯಿತು. 11.30ಕ್ಕೆ ನಿಗದಿಯಾಗಿದ್ದ ಪತ್ರಿಕಾಗೋಷ್ಠಿಗೆ ಎರಡು ಗಂಟೆ ತಡವಾಗಿ 1.30ಕ್ಕೆ ಆಗಮಿಸಿದ್ದರು. ತಡವಾಗಿ ಬಂದಿದ್ದಕ್ಕೆ ಅಲ್ಲು ಅರ್ಜುನ್​ ವಿರುದ್ಧ ಕನ್ನಡದ ಮಾಧ್ಯಮಗಳು ಗರಂ ಆಗಿ ಆಕ್ರೋಶ ಹೊರಹಾಕಿದ್ದರು. ಆಕ್ರೋಶಕ್ಕೆ ಮಣಿದಿದ್ದ ಅಲ್ಲು ಅರ್ಜುನ್​ ಕೊನೆ ಕ್ಷಮೆ ಕೇಳಿದ್ದರು.

ಇದೀಗ ಇದೇ ಅನುಭವನ್ನು ಯಶ್​ ಅನುಭವಿಸಿದ್ದಾರೆ. ವಿಶಾಖಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆಜಿಎಫ್​ 2 ಚಿತ್ರತಂಡ ಪತ್ರಿಕಾಗೋಷ್ಠಿಗೆ ಯಶ್​ ಒಂದು ಗಂಟೆ ತಡವಾಗಿ ಹೋಗಿದ್ದಕ್ಕೆ ಅಲ್ಲಿನ ಮಾಧ್ಯಮಗಳು ಯಶ್​ ವಿರುದ್ಧ ಅಸಮಾಧಾನ ಹೊರಹಾಕಿದವು. ಬಳಿಕ ಯಶ್​ ಕ್ಷಮೆಯಾಚಿಸುವ ಮೂಲಕ ಆಕ್ರೋಶವನ್ನು ತಣ್ಣಗಾಗಿಸಿದರು.

ಹೀಗಾಗಿ ಇದನ್ನು ರಿವೇಂಜ್​ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲಾಗುತ್ತಿದೆ. ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಹೀರೋ ಅಥವಾ ಹೀರೋಯಿನ್​ ತಡವಾಗಿ ಆಗಮನವಾಗುವುದು ಸಾಮಾನ್ಯ. ಆದರೆ, ಇದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಗೆ ಆಹಾರವಾಗಿರುವುದು ವಿಪರ್ಯಾಸ. (ಏಜೆನ್ಸೀಸ್​)