ಸಿನಿವಾಣಿ

RRR ಸಿನಿಮಾ ಬಗ್ಗೆ ನಿಕೇಶಾ ಪಟೇಲ್​ ಮಾಡಿದ ಟ್ವೀಟ್​ ನೋಡಿ ಜೂ. ಎನ್​ಟಿಆರ್-ರಾಮ್​ಚರಣ್ ಫ್ಯಾನ್ಸ್​​ ಗರಂ!

ಹೈದರಾಬಾದ್​: ವರದನಾಯಕ, ಡಕೋಟಾ ಪಿಕ್ಚರ್​ ಮತ್ತು ಲವ್​ ಯು ಆಲಿಯಾ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತವಾಗಿರುವ ನಟಿ ನಿಕೇಶಾ ಪಟೇಲ್, ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಎಸ್​.ಎಸ್​. ರಾಜಮೌಳಿ ನಿರ್ದೇಶನದ ಹಾಗೂ ಜೂ. ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿನಯದ "ಆರ್​ಆರ್​ಆರ್​" ಸಿನಿಮಾ ಬಗ್ಗೆ ನಿಕೇಶಾ ಅವರು ಮಾಡಿರುವ ಟ್ವೀಟ್​ ಇದೀಗ ಉಭಯ ನಟರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಆರ್​ಆರ್​ಆರ್​ ಸಿನಿಮಾವನ್ನು ನೋಡಿ ಅನೇಕರು ಕೊಂಡಾಡಿದ್ದಾರೆ. ಹಾಲಿವುಡ್​ನಲ್ಲೂ ನಿರ್ದೇಶಕ ರಾಜಮೌಳಿ ಅವರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಾಕ್ಸ್​ಆಫೀಸ್​ನಲ್ಲೂ ಸಹ ಈ ಸಿನಿಮಾ 1000 ಕೋಟಿ ರೂಪಾಯಿಗು ಅಧಿಕ ಕಲೆಕ್ಸನ್​ ಮಾಡಿ, ದಾಖಲೆ ಬರೆದಿದೆ. ಭರ್ಜರಿ ಯಶಸ್ಸು ಕಂಡಿರುವ ಆರ್​ಆರ್​ಆರ್​ ಸಿನಿಮಾ ಬಗ್ಗೆ ಇದೀಗ ನಿಕೇಶಾ ಆಡಿರುವ ಮಾತು ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಸಿನಿಮಾ ನೋಡಿ ಟ್ವೀಟ್​ ಮಾಡಿರುವ ನಿಕೇಶಾ, ನಾನು ಈಗಷ್ಟೇ ಆರ್​ಆರ್​ಆರ್​ ಸಿನಿಮಾವನ್ನು ನೋಡಿದೆ. ನನಗೆ ಸಿನಿಮಾ ಇಷ್ಟವಾಗಲಿಲ್ಲ. ನನಗೆ ಹೇಳಬೇಕು ಅನಿಸಿತು ಅದಕ್ಕೆ ಹೇಳಿದೆ. ನೀವು ನೋಡುವ ಎಲ್ಲ ಸಿನಿಮಾವನ್ನು ನೀವು ಇಷ್ಟಪಡಬೇಕು ಅಂತೇನಿಲ್ಲ. ಪ್ರತಿಯೊಬ್ಬರಿಗು ಅವರದೇಯಾದ ಒಂದು ಅಭಿಪ್ರಾಯವನ್ನು ಹೊಂದಿರುತ್ತಾರೆ ಎಂದು ನಿಕೇಶಾ ಹೇಳಿದ್ದಾರೆ.

ಇದೀಗ ನಿಕೇಶಾ ಆಡಿರುವ ಮಾತನ್ನು ಉಲ್ಲೇಖಿಸಿ ಎನ್​ಟಿಆರ್​ ಮತ್ತು ರಾಮ್​ಚರಣ್​​ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. ನಿಮ್ಮ ಸಿನಿಮಾಗಳನ್ನು ಸಹ ನಾವು ನೋಡಿದ್ದೇವೆ. ನಿಮ್ಮ ನಟನೆ ತುಂಬಾ ಕಳಪೆಯಾಗಿದೆ. ಇದು ನಮ್ಮ ಅಭಿಪ್ರಾಯವಷ್ಟೇ ಎಂದು ನಿಕೇಶಾ ಪಟೇಲ್​ ಅವರಿಗೆ ನೆಟ್ಟಿಗರು ಟಾಂಗ್​ ಕೊಟ್ಟಿದ್ದಾರೆ. ಅಲ್ಲದೆ, ನಿಕೇಶಾ ಅವರ ಪುಲಿ ಸಿನಿಮಾದ ಹೀನಾಯ ಸೋಲನ್ನು ಮರು ನೆನಪಿಸಿ, ಕಾಲೆಳೆಯುತ್ತಿದ್ದಾರೆ.

ಅಂದಹಾಗೆ ನಿಕೇಶಾ ಕೈಯಲ್ಲಿ ಸದ್ಯ ಯಾವುದೇ ಸಿನಿಮಾಗಳಿಲ್ಲ. ಯಾರಾದರೂ ಅವಕಾಶ ನೀಡಿದರೆ, ಸಿನಿ ರಂಗದಲ್ಲಿ ಎರಡನೇ ಇನ್ನಿಂಗ್ಸ್​ ಆರಂಭಿಸಲು ನಿಕೇಶಾ ರೆಡಿಯಾಗಿದ್ದಾರೆ. (ಏಜೆನ್ಸೀಸ್​)