ಸಿನಿವಾಣಿ

ಸಮಂತಾ-ನಾಗಚೈತನ್ಯ ಡಿವೋರ್ಸ್​ ಹಿಂದಿನ ಪ್ರಮುಖ ಕಾರಣ ಬಯಲು: ಇಬ್ಬರ ನಡುವೆ ನಡೆದಿತ್ತು ವಾಗ್ವಾದ..!

ಹೈದರಾಬಾದ್​: ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಅವರಿಬ್ಬರ ನಡುವಿನ ಸಂಬಂಧ ಡಿವೋರ್ಸ್​ ಹಂತಕ್ಕೆ ತಲುಪಿದೆ ಎಂಬ ವಿಚಾರ ಬೆಳಕಿಗೆ ಬಂದಾಗಿನಿಂದ ಸಮಂತಾ ಮತ್ತು ನಾಗಚೈತನ್ಯ ಟಾಕ್​ ಆಫ್​ ದಿ ಟೌನ್​ ಆಗಿದ್ದರು. ಅಕ್ಕಿನೇನಿ ಕುಟುಂಬದಿಂದ ಸಮಂತಾ ಅಂತರ ಕಾಯ್ದುಕೊಂಡಿದ್ದು, ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬುದು ಬಹುತೇಕ ಖಚಿವಾದಂತಿತ್ತು. ಆದರೆ, ಬಹು ದಿನಗಳವರೆಗೆ ಯಾರೋಬ್ಬರು ಡಿವೋರ್ಸ್​ ಬಹಿರಂಗವಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ. ಕೊನೆಗೂ ಮೌನ ಮುರಿದಿರುವ ಸಮಂತಾ ಮತ್ತು ನಾಗಚೈತನ್ಯ ತಂತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇಬ್ಬರು ಬೇರೆ ಬೇರೆ ಆಗುತ್ತಿರುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಆದರೆ, ತಾವು ಬೇರೆ ಆಗುತ್ತಿರುವುದಕ್ಕೆ ಇಬ್ಬರು ಸೂಕ್ತ ಕಾರಣ ನೀಡಿಲ್ಲ.

ಹಾಗದರೆ, ಸಮಂತಾ ಮತ್ತು ನಾಗಚೈತನ್ಯ ನಡುವಿನ ವೈಮನಸ್ಸಿಗೆ ಕಾರಣ ಏನಿರಬಹುದು ಎಂಬ ವಿಚಾರಗಳ ಕಡೆ ಗಮನಹರಿಸಿದಾಗ ಒಂದಿಷ್ಟು ಅಂಶ ಬೆಳಕಿಗೆ ಬರುತ್ತದೆ. ನಾಗಚೈತನ್ಯಗೆ ಕುಟುಂಬದ ಮೇಲೆ ಹೆಚ್ಚು ಗಮನಹರಿಸಲು ಆರಂಭಿಸಿದ್ದರಂತೆ, ಅವರಿಗೆ ಮಗು ಮಾಡಿಕೊಳ್ಳುವ ಪ್ಲ್ಯಾನ್​ ಇತ್ತು. ಆದರೆ, ಸಮಂತಾಗೆ ತಮ್ಮ ವೃತ್ತಿ ಬದುಕಿನೆಡೆಗೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದರು ಮತ್ತು ಮಗು ಮಾಡಿಕೊಳ್ಳುವ ಪ್ಲ್ಯಾನ್​ ಅನ್ನು ಮುಂದೂಡಿದ್ದರು. ಇದು ಇಬ್ಬರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇದಿಷ್ಟೇ ಅಲ್ಲ, ಇನ್ನು ಕೆಲವು ಮೂಲಗಳ ಪ್ರಕಾರ ಸಮಂತಾ ಇತ್ತೀಚೆಗೆ ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಳ್ಳುತ್ತಿರುವುದು ಅಕ್ಕಿನೇನಿ ಕುಟುಂಬಕ್ಕೆ ಇರುಸು-ಮುರುಸು ತಂದಿದೆ ಎನ್ನಲಾಗಿದೆ. ಫೋಟೋಶೂಟ್​ ಆಗಿರಬಹುದು ಅಥವಾ ಸಿನಿಮಾ ಆಗಿರಬಹುದು ಸಮಂತಾ ಅರಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಿರುವುದೇ ಕುಟುಂಬದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಅಲ್ಲದೆ, ಮದುವೆಯ ಬಳಿಕ ಸಮಂತಾ, ತನ್ನ ಅತ್ತೆ ಅಮಲಾ ಅಕ್ಕಿನೇನಿಯಂತೆ ಇರಬೇಕೆಂಬುದು ನಾಗ ಚೈತನ್ಯ ಮತ್ತು ನಾಗಾರ್ಜುನ ಬಯಕೆಯಾಗಿತ್ತೆನ್ನಲಾಗಿದೆ. ಆದರೆ, ಸಮಂತಾ ಇದಕ್ಕೆ ವಿರುದ್ಧವಾಗಿರುವುದೇ ಕುಟುಂಬದಲ್ಲಿ ಮನಸ್ತಾಪಕ್ಕೆ ಕಾರಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇತ್ತಿಚೆಗೆ ತೆರೆಕಂಡ ಹಾಗೂ ಸಮಂತಾ ಕೊನೆಯದಾಗಿ ಕಾಣಿಸಿಕೊಂಡ "ದಿ ಫ್ಯಾಮಿಲಿ ಮ್ಯಾನ್​ 2" ವೆಬ್​ ಸರಣಿಯು ಕೂಡ ಅಕ್ಕಿನೇನಿ ಕುಟುಂಬದ ಮನಸ್ತಾಪಕ್ಕೆ ಒಂದು ಕಾರಣವಾಗಿದೆ. ಈ ಚಿತ್ರದಲ್ಲಿ ಸಮಂತಾ ತುಂಬಾ ಬೋಲ್ಡ್​ ಪಾತ್ರದಲ್ಲಿ ನಟಿಸಿದ್ದಾರೆ. ಸರಸ ಸಲ್ಲಾಪ ದೃಶ್ಯದಲ್ಲಿ ಅರಬೆತ್ತಲೆಯಾಗಿ ಮೈಮಾಟ ಪ್ರದರ್ಶಿಸಿರುವುದು ಕೂಡ ಅಕ್ಕಿನೇನಿ ಕುಟುಂಬಕ್ಕೆ ಬೇಸರ ತರಿಸಿದೆ ಎಂದು ಕಾಲಿವುಡ್​ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ನಿನ್ನೆ (ಅ.2) ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್​ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್​ ಮಾಡಿದ್ದಾರೆ. "ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್​ ಆನ್​ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.

ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್​ ಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್​ ಆಗಿದೆ. ಅನೇಕರು ನೀವಿಬ್ಬರು ದೂರಾಗಬಾರದಿತ್ತು, ಮತ್ತೆ ಒಂದಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​​​)