ಹೈದರಾಬಾದ್: ಮದುವೆ ಕುರಿತು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಬಹುಭಾಷಾ ನಟಿ ನಿತ್ಯಾ ಮೆನನ್ ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ ನಟಿ ನಿತ್ಯಾ ಮೆನನ್ ಹೆಸರು ಕೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ, ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹಾಗೂ ಮಾಲಿವುಡ್ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ.
ಮಲಯಾಳಂ ಬ್ಯೂಟಿ ಮದುವೆಗೆ ಸಿದ್ದರಾಗುತ್ತಿದ್ದಾರೆ. ಅವರು ಮಲಯಾಳಂ ಸ್ಟಾರ್ ನಟರೊಬ್ಬರನ್ನು ಮದುವೆ ಆಗಲಿದ್ದಾರೆ. ಸಿನಿಮಾ ಲೋಕಕ್ಕೆ ಕಾಲಿಡುವ ಮುಂಚೆಯೇ ನಿತ್ಯಾ ಮತ್ತು ಸ್ಟಾರ್ ನಟನ ನಡುವೆ ಸ್ನೇಹವಿತ್ತು. ಮೊದಲು ಪರಿಚಯವಾಗಿ, ನಂತರ ಸ್ನೇಹಕ್ಕೆ ತಿರುಗಿ, ಬಳಿಕ ಇಬ್ಬರ ನಡುವೆ ಲವ್ ಆಗಿದೆ. ಇದೀಗ ಇಬ್ಬರು ಸಪ್ತಪದಿ ತುಳಿಯಲಿದ್ದಾರೆ ಎಂದು ಭಾರೀ ಸುದ್ದಿಯಾಗಿತ್ತು.
ಈ ವಿಚಾರವಾಗಿ ಇದೀಗ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿತ್ಯಾ ಮೆನನ್, ವದಂತಿಗಳನ್ನು ಅಲ್ಲಗೆಳೆದಿದ್ದಾರೆ. ನಾನು ಮಲಯಾಳಂ ಸ್ಟಾರ್ ನಟರೊಬ್ಬರನ್ನು ಮದುವೆ ಆಗುತ್ತಿದ್ದೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ. ಸದ್ಯ ನಾನು ಸಿನಿಮಾಗಳಲ್ಲಿ ಬಿಜಿಯಾಗಿದ್ದೇನೆ. ನಾನು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಲ್ಲಿ, ಖಂಡಿತವಾಗಿ ನಿಮಗೆಲ್ಲ ತಿಳಿಯುತ್ತೇನೆ ಎನ್ನುವ ಮೂಲಕ ವದಂತಿಗಳಿಗೆ ನಿತ್ಯಾ ಬ್ರೇಕ್ ಹಾಕಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಜಯ್ ಸೇತುಪತಿ ಮತ್ತು ನಿತ್ಯಾ ಅಭಿನಯದ 19 (1) ಎ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಒಟಿಟಿ ವೇದಿಕೆಯಲ್ಲಿ ಈ ಸಿನಿಮಾ ಪ್ರಸಾರವಾಗಲಿದೆ.
ಈ ಸಿನಿಮಾ ಹೊರತುಪಡಿಸಿದರೆ, ಧನುಷ್ ಅಭಿನಯದ ತಮಿಳಿನ ತಿರುಚಿತ್ರಂಬಲಂ ಹಾಗೂ ಮಲಯಾಳಂನ ಕೊಲಂಬಿ ಸಿನಿಮಾಗಳಲ್ಲಿ ನಿತ್ಯಾ ನಟಿಸುತ್ತಿದ್ದಾರೆ. (ಏಜೆನ್ಸೀಸ್)