ಚೆನ್ನೈ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ.
ಇದೀಗ ಅದೇ ರೀತಿಯ ಕಾಮೆಂಟ್ಗೆ ಸೌತ್ ಬ್ಯೂಟಿ ಶ್ರುತಿ ಹಾಸನ್ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಶ್ರುತಿ ಹಾಸನ್ ಆಗಾಗ ಅಭಿಮಾನಿಗಳ ಜತೆ ಸಂವಹನ ನಡೆಸುತ್ತಿರುತ್ತಾರೆ. ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ “ಆಸ್ಕ್ ಮಿ ಎನಿಥಿಂಗ್” ಸೆಷನ್ಸ್ ನಡೆಸಿದ್ದರು. ಯಾವುದೇ ಪ್ರಶ್ನೆಗಳನ್ನು ಮುಕ್ತವಾಗಿ ಕೇಳಲು ನೆಟ್ಟಿಗರಿಗೆ ಶ್ರುತಿ ತಿಳಿಸಿದ್ದರು.
ಈ ವೇಳೆ ನೆಟ್ಟಿಗನೊಬ್ಬ ನಿಮ್ಮ ತುಟಿಯ ಗಾತ್ರವೆಷ್ಟು ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಖಡಕ್ ಉತ್ತರ ನೀಡಿರುವ ಶ್ರುತಿ, ತುಟಿಗೂ ಗಾತ್ರ ಇರುತ್ತದೆಯೇ? ಎಂದು ಮರು ಪ್ರಶ್ನಿಸಿದ್ದಾರೆ. ಸೂಕ್ಷ್ಮ ಸಂವೇದನೆ ಅರಿಯದೇ ಏನೇನು ಪ್ರಶ್ನೆಗಳನ್ನು ಕೇಳಿ ನಟಿಯರನ್ನು ಮುಜುಗರ ಪಡುವಂತೆ ಮಾಡುವುದೇ ಕೆಲ ಟ್ರೋಲಿಗರ ಚಾಳಿಯಾಗಿದ್ದು, ಇದಕ್ಕೆ ನಟಿಯರು ಕೂಡ ಬೋಲ್ಡ್ ಆಗಿ ಉತ್ತರ ನೀಡುವ ಮೂಲಕ ಆಗಾಗ ಶ್ರುತಿ ರೀತಿ ಸುದ್ದಿಯಾಗುತ್ತಿರುತ್ತಾರೆ.
ಶ್ರುತಿ ಅವರು ಟ್ರೋಲ್ ಆಗುತ್ತಿರುವುದು ಇದೇ ಮೊದಲಲ್ಲ. ಶ್ರುತಿ ಈ ಹಿಂದೆ ನೆಟಿಜನ್‌ಗಳಿಂದ ಬಾಡಿ ಶೇಮಿಂಗ್ಗೆ ಒಳಗಾಗಿದ್ದಾರೆ. ಈ ಹಿಂದೆ ಫೋಟೋವೊಂದಕ್ಕೆ ಅನೇಕರು “ತುಂಬಾ ತೆಳ್ಳಗಾಗಿದ್ದೀರ”, “ವಯಸ್ಸಾದಂತೆ ಕಾಣುತ್ತಿದ್ದೀರ” ಎಂದು ಕಾಮೆಂಟ್ಗಳನ್ನು ಮಾಡಿದ್ದರು. ಇಂತಹ ಕಾಮೆಂಟ್ಗಳು ಬರಲಾರಂಭಿಸಿದ ತಕ್ಷಣ ಮತ್ತೊಂದು ಪೋಸ್ಟ್ನ್ನು ಹಾಕುವ ಮೂಲಕ ನಟಿ ಎಲ್ಲರ ಬಾಯಿ ಮುಚ್ಚಿಸಿದ್ದರು.
ತಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವ ಸತ್ಯವನ್ನು ಬಾಯ್ಬಿಟ್ಟಿರುವ ನಟಿ, ಇದು ನನ್ನ ಬದುಕು, ನನ್ನ ಮುಖ. ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ. ಅದನ್ನು ಹೇಳಿಕೊಳ್ಳಲು ನನಗೇನು ಹೇಸಿಗೆಯಿಲ್ಲ. ಅದನ್ನು ಪ್ರಚಾರ ಮಾಡಬೇಕೆಂದೇನಿಲ್ಲ. ಹಾಗಂತ ಅದರ ವಿರುದ್ಧವೂ ನಾನಿಲ್ಲ. ಇದು ನಾನು ಇರಲು ಬಯಸುವ ರೀತಿ ಎಂದು ಹೇಳಿಕೊಂಡಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ, ಶ್ರುತಿ ಅವರು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಚಿರಂಜೀವಿ ಅವರ 154ನೇ ಸಿನಿಮಾದಲ್ಲೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. (ಏಜೆನ್ಸೀಸ್)