ಮುಂಬೈ: ಒಂದು ಕಾಲದಲ್ಲಿ ಸಾಫ್ಟ್ಕೋರ್ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದ ಶಕೀಲಾ ಅವರು ತಮ್ಮ ಕುರಿತು ಹರಡಿದ್ದ ಅನಾರೋಗ್ಯ ಮತ್ತು ಸಾವಿನ ವದಂತಿಯ ಬಗ್ಗೆ ಗರಂ ಆಗಿದ್ದು, ಜುಲೈ 29ರಂದು ವಿಡಿಯೋ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.
ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಶಕೀಲಾ ಸಾವಿನ ಬಗ್ಗೆ ವದಂತಿ ಹರಿದಾಡಿತ್ತು. ಸಾಕಷ್ಟು ಮಂದಿ ಶೇರ್ ಮಾಡಿಕೊಂಡು ಸಂತಾಪವನ್ನು ಸೂಚಿಸಿದ್ದರು. ಇನ್ನು ಕೆಲವರು ಇದು ನಿಜಾನಾ ಎಂಬ ಪ್ರಶ್ನೆಯನ್ನು ಕೇಳಿದ್ದರು. ಇದರ ಬೆನ್ನಲ್ಲೇ ಸಾವಿನ ವಿಚಾರ ಶಕೀಲಾ ಅವರ ಕಿವಿಗೆ ಬಿದ್ದು, ತಕ್ಷಣ ವಿಡಿಯೋ ಮೂಲಕ ಸಂದೇಶವನ್ನು ರವಾನಿಸಿದ್ದಾರೆ.
ನನ್ನ ಸಾವಿನ ಕುರಿತಾದ ಸುದ್ದಿಯನ್ನು ಕೇಳಿದೆ. ಆ ರೀತಿ ಏನೂ ನಡೆದಿಲ್ಲ. ನನಗೇನು ಆಗಿಲ್ಲ. ನಾನು ಆರೋಗ್ಯದಿಂದ ಸಂತೋಷವಾಗಿದ್ದೇನೆ. ನನ್ನ ಬಗ್ಗೆ ಕೆಲವರು ತಪ್ಪು ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಇದಾರಿಂದಾಗಿ ನಾನು ಅನೇಕ ಕರೆಗಳನ್ನು ಸ್ವೀಕರಿಸಬೇಕಾಯಿತು. ನನ್ನ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದಗಳು. ನನ್ನ ಸಾವಿನ ಬಗ್ಗೆ ನಕಲಿ ಸುದ್ದಿ ಹರಿಬಿಟ್ಟು ನನ್ನ ಬಗ್ಗೆ ಜನರು ಚಿಂತಿಸುವಂತೆ ಮಾಡಿದ ವ್ಯಕ್ತಿಗೂ ಸಹ ಧನ್ಯವಾದಗಳು ಎಂದು ಶಕೀಲಾ ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಶಕೀಲಾ ಅವರ ಮುಂದಿನ ಚಿತ್ರ ‘ಅಟ್ಟರ್ ಪ್ಲಾಪ್ ಮೂವೀ’ ಮತ್ತು ‘ರೊಮ್ಯಾನ್ಸ್’ ಬಿಡುಗಡೆಗೆ ಸಿದ್ಧವಾಗಿದೆ. ಒಟಿಟಿ ವೇದಿಕೆಯಲ್ಲಿ ಶಕೀಲಾ ಅವರು ಯಾವ ರೀತಿಯಲ್ಲಿ ಹವಾ ಎಬ್ಬಿಸುತ್ತಾರೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)