ಸಿನಿವಾಣಿ

ಅವಕಾಶಕ್ಕಾಗಿ ಮಂಚ ಏರುವುದು ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಕಾಮನ್ ಎಂದಿದ್ದ ತೆಲುಗು ನಿರ್ದೇಶಕ ಯೂಟರ್ನ್!​

ಬೆಂಗಳೂರು: ಕನ್ನಡದ ಖ್ಯಾತ ನಟಿಯೊಬ್ಬಳು ನನ್ನನ್ನು ಮಂಚಕ್ಕೆ ಕರೆದಿದ್ದಳು. ಅವಕಾಶಕ್ಕಾಗಿ ಮಂಚ ಏರುವುದು ಕನ್ನಡದಲ್ಲಿ ಕಾಮನ್ ಎನ್ನುವ ಮೂಲಕ ಕನ್ನಡ ಸಿನಿ ಇಂಡಸ್ಟ್ರಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಟಾಲಿವುಡ್​​ ನಿರ್ಮಾಪಕ ಹಾಗೂ ನಿರ್ದೇಶಕ ಗೀತ ಕೃಷ್ಣ ಇದೀಗ ಉಲ್ಟಾ ಹೊಡೆದಿದ್ದಾನೆ.

ತನ್ನ ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಗೀತ ಕೃಷ್ಣ, ನಾನು ಕನ್ನಡಿಗರ ಬಗ್ಗೆ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿಲ್ಲ. ನಾನು ಒಬ್ಬ ನಿರ್ಮಾಪಕ ಕಮ್ ನಿರ್ದೇಶಕನಾಗಿದ್ದೇನೆ. ನನಗೆ ಯಾರು ತಾನೇ ಕಾಸ್ಟಿಂಗ್ ಕೌಚ್ ಮಾಡಲು ಸಾಧ್ಯ. ನಾನು ಎಲ್ಲಾ ಚಿತ್ರರಂಗದಲ್ಲಿರುವ ಕೊಳಕು ಮನಸ್ಥಿತಿಯ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದಿದ್ದಾರೆ.

ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಸಮಸ್ಯೆ ಆಗಿತ್ತು. ಆ ಸಮಸ್ಯೆಯಿಂದ ನಾನು ಅಲ್ಲಿ ಉಳಿಯಲಿಲ್ಲ. ನನಗಾದ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದೇನೆ ಎಂದು ಗೀತ ಕೃಷ್ಣ ಸುದ್ದಿಗಾರರ ಮುಂದೆ ಸಮಜಾಯಿಷಿ ನೀಡಿದ್ದಾರೆ.

ಈ ಹಿಂದೆ ಗೀತ ಕೃಷ್ಣ ಹೇಳಿದ್ದೇನು?

ಯುಟ್ಯೂಬ್ ಸಂದರ್ಶನದಲ್ಲಿ ಕನ್ನಡ ಹಾಗೂ ತಮಿಳು ಚಿತ್ರರಂಗದ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆ ನೀಡಿದ್ದ ಗೀತ ಕೃಷ್ಣ, ತಮಿಳು ಚಿತ್ರರಂಗದವರು ತುಂಬಾ ಅಸಹ್ಯ, ಕನ್ನಡದವರಂತೂ ಇನ್ನೂ ಅಸಹ್ಯ ಎಂದಿದ್ದರು. ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ. ನಟಿಯಿಂದ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಕನ್ನಡದ ಖ್ಯಾತ ನಟಿಯೊಬ್ಬಳು ನನ್ನನ್ನು ಮಂಚಕ್ಕೆ ಕರೆದಿದ್ದಳು. ಅವಕಾಶಕ್ಕಾಗಿ ಮಂಚ ಏರುವುದು ಕನ್ನಡದಲ್ಲಿ ಕಾಮನ್. ನಾನು ಕನ್ನಡದ ಸಹವಾಸ ಬೇಡ ಅಂತ ಓಡಿ ಬಂದೆ ಎಂದು ನಾಲಿಗೆ ಹರಿಬಿಟ್ಟಿದ್ದರು.

ಅಂದಹಾಗೆ ಗೀತ ಕೃಷ್ಣ ತೆಲುಗುನಲ್ಲಿ ಕೆಲವೊಂದು ಚಿತ್ರಗಳ ನಿರ್ದೇಶನ ಮಾಡಿದ್ದಾರೆ. ಅವರು ಬೇರೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿಲ್ಲ. ಅಷ್ಟೇ ಯಾಕೆ ತೆಲುಗಿನಲ್ಲೇ ಅವರಿಗೆ ಒಳ್ಳೆಯ ಹೆಸರಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. (ಏಜೆನ್ಸೀಸ್​)