ಹೈದರಬಾದ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವಿವಾದಗಳ ಕೇಂದ್ರ ಬಿಂದು ಎಂಬುದು ಗೊತ್ತಿರುವ ವಿಚಾರ. ಸದಾ ವಿವಾದಗಳನ್ನೇ ಹುಟ್ಟುಹಾಕವ ಮೂಲಕ ಸುದ್ದಿಯಾಗುವುದೇ ಇವರ ಖಯಾಲಿಯಾಗಿದೆ. ನಿನ್ನೆಯಷ್ಟೆ (ಅ.2) ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಆರ್ಜಿವಿ ಆಡಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗುರಿಯಾಗಿದೆ.
ಟ್ವೀಟ್ ಮೂಲಕ ಸಾಲು ಸಾಲಾಗಿ ಬರೆದುಕೊಂಡಿರುವ ಆರ್ಜಿವಿ, ಹೆಚ್ಚಿನ ಮದುವೆಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನರು ಡಿವೋರ್ಸ್ ಅನ್ನು ಆಚರಿಸುತ್ತಾರೆ. ವಿಚ್ಛೇದಿತ ಎಲ್ಲ ಪುರುಷರು ಮತ್ತು ಮಹಿಳೆಯರು ಹಾಡಲು ಮತ್ತು ನೃತ್ಯ ಮಾಡಲು ಸಂಗೀತ ಕಾರ್ಯಕ್ರಮ ನಡೆಯಲೇಬೇಕು ಎಂದಿದ್ದಾರೆ.
ಇಷ್ಟೇ ಅಲ್ಲದೆ, ಮದುವೆ ಎಂಬುದು ನರಕದಲ್ಲಿ ನಿಶ್ಚಯ ಮಾಡಿದ್ದು, ಡಿವೋರ್ಸ್ ಎಂಬುದು ಸ್ವರ್ಗದಲ್ಲಿ ಸೃಷ್ಟಿಯಾಗಿದ್ದು, ಮದುವೆ ಎಂಬುದು ಒಂದು ರೋಗ, ಅದನ್ನು ಗುಣಪಡಿಸುವುದೇ ಡಿವೋರ್ಸ್, ಮದುವೆ ಎಂಬುದು ಬ್ರಿಟಿಷರ ನಿಯಮ, ಡಿವೋರ್ಸ್ ಎಂಬುದು ಸ್ವಾತಂತ್ರ್ಯ, ಮದುವೆ ಎಂಬುದು ಹಿಟ್ಲರ್, ಅದು ಯದ್ಧವನ್ನು ಸೃಷ್ಟಿ ಮಾಡುತ್ತದೆ. ಡಿವೋರ್ಸ್ ಎಂಬುದು ಗಾಂಧಿ ಅವರ ಸ್ವಾತಂತ್ರ್ಯದ ಜಯವಾಗಿದೆ. ನಾವು ಸಂಭ್ರಮಿಸಬೇಕಿರುವುದು ಮದುವೆಯನ್ನಲ್ಲ ಡಿವೋರ್ಸ್ ಅನ್ನು ಆಚರಿಸಬೇಕು. ಏಕೆಂದರೆ, ಮದುವೆ ಸಾವಾದರೆ, ಡಿವೋರ್ಸ್ ಪುನರ್ಜನ್ಮ ಎಂದು ಆರ್ಜಿವಿ ಸಾಲು ಸಾಲಾಗಿ ಬರೆದುಕೊಂಡಿದ್ದಾರೆ.
ಅಂದಹಾಗೆ ನಿನ್ನೆ (ಅ.2) ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ತಂತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಒಂದೇ ರೀತಿಯ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. "ಸಾಕಷ್ಟು ಸಮಾಲೋಚನೆಯ ಬಳಿಕವು ನಾವಿಬ್ಬರೂ ಗಂಡ-ಹೆಂಡತಿಯ ಸಂಬಂಧ ಬಿಟ್ಟು ಬೇರೆ ಬೇರೆಯಾಗುವ ನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ದಶಕದ ಮಟ್ಟಿಗಿನ ಆಪ್ತಸ್ನೇಹವನ್ನು ನಾವು ಹೊಂದಿದ್ದೆವು. ಬಹುಶಃ ಅದೇ ನಮ್ಮಿಬ್ಬರ ಸಂಬಂಧದ ಸತ್ವವಾಗಿತ್ತು. ಇದರಿಂದಲೇ ಮುಂದೆಯೂ ನಮ್ಮಿಬ್ಬರ ನಡುವೆ ವಿಶೇಷ ನಂಟು ಮುಂದುವರಿಯುತ್ತದೆ ಎಂದು ನಂಬಿದ್ದೇವೆ” ಎಂದು ಸಮಂತಾ ಮತ್ತು ನಾಗಚೈತನ್ಯ ಬರೆದಿದ್ದಾರೆ. ಜೊತೆಗೆ, ತಮ್ಮ ಈ ಕಷ್ಟಕಾಲದಲ್ಲಿ ತಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮದವರು ತಮಗೆ ಬೆಂಬಲ ನೀಡಬೇಕು. ತಾವು ಮೂವ್ ಆನ್ ಆಗಲು ಅಗತ್ಯವಾದ ಪ್ರೈವೆಸಿ ಕೊಡಬೇಕು ಎಂದೂ ಮನವಿ ಮಾಡಿದ್ದಾರೆ.
ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಸುದ್ದಿ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿದೆ. ಅನೇಕರು ನೀವಿಬ್ಬರು ದೂರಾಗಬಾರದಿತ್ತು, ಮತ್ತೆ ಒಂದಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)