ಸಿನಿವಾಣಿ

ರಾಜಕುಮಾರ ಅಮರ: ಕೊನೆಯದಾಗಿ ತೆರೆಕಂಡ ಯುವರತ್ನ ಚಿತ್ರದ ನಟಿ ಸಯೇಶಾ ಭಾವುಕ ಮಾತು

ಬೆಂಗಳೂರು: ಚಂದನವನದ ‘ರಾಜಕುಮಾರ’, ಸಹಸ್ರಾರು ಅಭಿಮಾನಿಗಳ ‘ವೀರ ಕನ್ನಡಿಗ’ ಪುನೀತ್​ ರಾಜ್​ಕುಮಾರ್​ ಅವರು ಬಾರದೂರಿಗೆ ಪಯಣ ಬೆಳೆಸಿದ್ದು, ಕರುನಾಡು ಕಣ್ಣೀರ ಕಡಲಲ್ಲಿ ಮುಳುಗಿದೆ.

ನಿನ್ನೆ (ಅ.29) ಬೆಳಗ್ಗೆ ಮನೆಯಲ್ಲಿ ಜಿಮ್​ ಮಾಡುವಾಗ ಹೃದಯಾಘಾತ ಆಯಿತು. ತಕ್ಷಣ ಅವರನ್ನು ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ಗಂಭೀರವಾದ ಬಳಿಕ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಸಂಖ್ಯಾತ ಅಭಿಮಾನಿಗಳ ಕೋರಿಕೆ ಫಲಿಸಲೇ ಇಲ್ಲ. ಆಸ್ಪತ್ರೆಯಲ್ಲೇ ಪುನೀತ್​ ಕೊನೆಯುಸಿರೆಳೆದಿದ್ದಾರೆ.

ಚಿತ್ರರಂಗ ಸದಸ್ಯನ ಅಕಾಲಿಕ ಮರಣದಿಂದ ಆಘಾತಕ್ಕೆ ಒಳಗಾಗಿರುವ ಭಾರತೀಯ ಚಿತ್ರರಂಗದ ಗಣ್ಯರು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. ಕಲಾವಿದರು ಮಾತ್ರವಲ್ಲದೆ, ಕ್ರೀಡೆ ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಕೂಡ ಕಂಬನಿ ಮಿಡಿದಿದ್ದಾರೆ.

ಕೊನೆಯದಾಗಿ ಬಿಡುಗಡೆಯಾದ ಪುನೀತ್​ ಅವರ ಯುವರತ್ನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ನಟಿ ಸಯೇಶಾ, ಅಪ್ಪು ಬಗ್ಗೆ ತುಂಬಾ ಭಾವುಕರಾಗಿ ಬರೆದುಕೊಂಡಿದ್ದಾರೆ. ಪುನೀತ್​ ರಾಜ್​ಕುಮಾರ್​ ನನ್ನ ಸ್ನೇಹಿತ... ನನ್ನ ಕುಟುಂಬ, ಮುತ್ತಿನಂಥ ಮನುಷ್ಯ. ಅವರು ಇನ್ನಿಲ್ಲ ಎನ್ನುವ ದುಃಖವನ್ನು ವಿವರಿಸಲು ಪದಗಳೇ ಇಲ್ಲ. ನಿಜಕ್ಕೂ ಇದು ಭಾವನಾತ್ಮಕ. ಇದು ತುಂಬಲಾರದ ನಷ್ಟ. ಅವರ ಮಡದಿ ಅಶ್ವಿನಿ ಅಕ್ಕ ಮತ್ತು ಅವರ ಮಕ್ಕಳಿಗೆ ಸಾಂತ್ವಾನ ಹೇಳುತ್ತೇನೆ. ಅವರ ಕುಟುಂಬ, ಲಕ್ಷಾಂತರ ಅಭಿಮಾನಿಗಳು ಮತ್ತು ಸ್ನೇಹಿತರಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ನಿಮ್ಮ ಜತೆ ನಟಿಸಿದ್ದ ನನ್ನ ಗೌರವ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಸಯೇಶಾ ಕಂಬನಿ ಮಿಡಿದಿದ್ದಾರೆ. (ಏಜೆನ್ಸೀಸ್​)