More

    ಅಗಲಿದ ರಾಜಕುಮಾರನಿಗೆ ಚಿತ್ರರಂಗದ ಗಣ್ಯರಿಂದ ಕಂಬನಿ ವಿದಾಯ…

    ಈ ಕಣ್ಣಿನಿಂದ ಇನ್ನೂ ಏನೆಲ್ಲ ನೋಡಬೇಕೋ…

    ಭಗವಂತ ಇನ್ನು ಏನೆಲ್ಲ ನೋಡಬೇಕೆಂದು ಉಳಿಸಿದ್ದಾನೋ ಗೊತ್ತಿಲ್ಲ. ಅಣ್ಣ ಹೋಗೋದನ್ನು ನೋಡಿದೆ. ವರದಪ್ಪ, ಪಾರ್ವತಮ್ಮ ಕಣ್ಮರೆಯಾಗಿದ್ದನ್ನೂ ನೋಡಿದೆ. ಈಗ ಅಪು್ಪ ಸಹ ಇಲ್ಲವಾಗಿದ್ದಾನೆ. ನಮ್ಮ ಆಪ್ತರಾದ ದೊರೆ, ಉದಯ ಶಂಕರ್, ರಾಜನ್ ನಾಗೇಂದ್ರ, ವೆಂಕಟೇಶ್, ಎಸ್​ಪಿಬಿ… ಹೀಗೆ ಎಲ್ಲ ಬಂಧು ಬಳಗವನ್ನೂ ಕಳೆದುಕೊಂಡಿದ್ದೆ. ಅಪು್ಪ ನಿನಗೇನಿತ್ತು ಇಷ್ಟು ಅವಸರ? ನಾನೇ ಇನ್ನೂ ಕಲ್ಲಿನಂತಿದ್ದೇನೆ. ನಿನಗೇನಾಗಿತ್ತು? ಇಷ್ಟು ದೊಡ್ಡ ಪೆಟ್ಟು ನೀಡಿ ಹೊರಟು ಹೋದ್ಯಲ್ಲ. ತುಂಬ ನೋವಾಗುತ್ತಿದೆ. ನಾನೇ ನನ್ನ ಕೈಯಾರೆ ಎತ್ತಿ ಆಡಿಸಿದ ಮಗು. ಹುಟ್ಟಿದ ತಕ್ಷಣವೇ ನನ್ನ ಕೈಗೆ ಬಿದ್ದವ. ಮುದ್ದು ಮುದ್ದಾಗಿ ಮಾಮ.. ಮಾಮ ಎಂದು ಕರೆಯುತ್ತಿದ್ದ. ಈಗಲೂ ಆ ತೊದಲು ನುಡಿಯ ಪುಟಾಣಿಯೇ ನನ್ನ ಕಣ್ಣಿಗೆ ಕಾಣುತ್ತಿದ್ದಾನೆ. ಆಗಿನ್ನು ಎರಡು- ಎರಡೂವರೆ ವರ್ಷದ ಮಗುವಾತ ಆತ. ‘ತಾಯಿಗೆ ತಕ್ಕ ಮಗ’ ಸಿನಿಮಾ ಶೂಟಿಂಗ್ ವೇಳೆ ‘ಮಾಮ.. ನೀನು ಕ್ಯಾಮರಾ ಪಕ್ಕದಲ್ಲಿ ನಿಂತರೆ ಮಾತ್ರ ನಾನು ನಟಿಸುತ್ತೇನೆ. ಇಲ್ಲದಿದ್ದರೆ ಇಲ್ಲ..’ ಹೀಗೆ ತನ್ನ ತುಂಟ ಸ್ವಭಾವದಿಂದಲೇ ನನ್ನನ್ನು ಕಾಡಿದ, ಕಿಟಲೆ ಮಾಡಿದ ನೆನಪುಗಳು ನನ್ನಲಿವೆ. ನಾಲ್ಕನೇ ವಯಸ್ಸಿಗೆ ಹಾಡ್ತಾನೆ. ಒಂದೇ ಟೇಕ್​ನಲ್ಲಿ ಓಕೆ ಮಾಡ್ತಾನೆ ಎಂದರೆ ಯಾರಿಗೆ ತಾನೆ ಅಚ್ಚರಿ ಆಗಲ್ಲ. ಹುಟ್ಟೋವಾಗಲೇ ಪವರ್ ಜತೆ ಬಂದಿದ್ದಾನೆ. ಸಂಗೀತ ಕಲಿತಿಲ್ಲ, ಆದರೂ ಅದ್ಬುತ ಗಾಯಕ. ನೃತ್ಯವನ್ನೂ ಯಾರಿಂದಲೂ ಹೇಳಿಸಿಕೊಂಡಿಲ್ಲ. ಡಾನ್ಸ್​ನಲ್ಲಿ ಅವನನ್ನು ಮೀರಿಸುವವರಿಲ್ಲ. ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಭಾಗ್ಯವಂತರು, ಬೆಟ್ಟದ ಹೂವು. ಯಾರಿವನು.. ಹೀಗೆ ಎಲ್ಲ ಸಿನಿಮಾಗಳಲ್ಲಿಯೂ ಅಪು್ಪ ಎಲ್ಲರ ಮೆಚ್ಚಿನ ಬಾಲ ನಟ. ಸ್ಕ್ರಿಪ್ಟ್ ಹೇಳುವ ಅವಶ್ಯಕತೆ ಇರಲಿಲ್ಲ. ಎಷ್ಟೇ ಉದ್ದದ ಡೈಲಾಗ್ ಇದ್ದರೂ ನಿರ್ಗಗಳವಾಗಿ ಹೇಳುತ್ತಿದ್ದ. ‘ಡೋಂಟ್ ವರಿ ಮಾಮ.. ನಾನು ಒಂದೇ ಟೇಕ್​ನಲ್ಲಿ ಹೇಳ್ತಿನಿ. ನೋಡ್ತಿರು..’ ಎನ್ನುತ್ತಿದ್ದ. ನಿಜಕ್ಕೂ ಅಪು್ಪ ತಂದೆಗೆ ತಕ್ಕ ಮಗ. ನಡವಳಿಕೆಯಲ್ಲಿ ಅಪ್ಪಟ ಅಪ್ಪ. ಲಿಕ್ಕರ್ ಮುಟ್ಟಿದವನಲ್ಲ, ಸಿಗರೇಟ್ ಮುಟ್ಟಿದವನಲ್ಲ. ಇದೀಗ ಈ ಸಾವು ನೆನಸಿಕೊಂಡರೆ, ‘ಚಲಿಸುವ ಮೋಡಗಳು’ ಚಿತ್ರದ ‘ಕಾಣದಂತೆ ಮಾಯವಾದನೋ, ನಮ್ಮ ಶಿವ ಕೈಲಾಸ ಸೇರಿಕೊಂಡನೋ..’ ಹಾಡೇ ನೆನಪಿಗೆ ಬರುತ್ತಿದೆ. ಇದೀಗ ‘ನಮ್ಮ ಅಪು್ಪ ಕೈಲಾಸ ಸೇರಿಕೊಂಡನು..’ ಎನ್ನುವಂತಾಗಿದೆ. ಆ ಹಾಡನ್ನು ಯಾಕಾದರೂ ಹಾಡಿದನೋ ಎಂದೆನಿಸುತ್ತಿದೆ.

    | ಎಸ್.ಕೆ. ಭಗವಾನ್, ಹಿರಿಯ ನಿರ್ದೇಶಕ

     

     

    ದೇವರ ಮೇಲಿನ ನಂಬಿಕೆಯೇ ಹೋಯಿತು!

    ಸದ್ಯ ನಮಗುಳಿದಿರುವುದು ಮೌನವೊಂದೆ. ಆ ಮೌನದಲ್ಲಿಯೇ ನಾವೆಲ್ಲರೂ ದೇವರನ್ನು ಕೇಳುತ್ತಿದ್ದೇವೆ. ನಾವು ಮಾಡಿದ ದ್ರೋಹವಾದರೂ ಏನೆಂದು. ದೇವರ ಮೇಲಿನ ನಂಬಿಕೆಯೇ ಹೊರಟು ಹೋಗಿದೆ. ಆ ದೇವರು ಮನುಷ್ಯನಾಗಿ ಹುಟ್ಟಿದ್ದರೆ, ಈ ಕಷ್ಟ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಆತ ಕಲ್ಲಾಗಿದ್ದಾನೆ. ನಮ್ಮ ಕಣ್ಣಲ್ಲಿ ರಕ್ತ ಬರಿಸಿ ಕೂತಿದ್ದಾನೆ. ಸಂತಾಪ ಹೇಳುವ ಬದಲು ಸಾಯುವುದೇ ವಾಸಿ. ಇದೆಲ್ಲವನ್ನೂ ನೋಡಲೆಂದೇ ನಮ್ಮನ್ನು ಆತ ಬದುಕಿಸಿದ್ದಾನಾ? ನಿಜಕ್ಕೂ ಎದೆ ಒಡೆದು ಹೋಯಿತು. ಅಪು್ಪವನ್ನು ಚಿಕ್ಕಂದಿನಿಂದ ನೋಡಿಕೊಂಡು ಬಂದಿದ್ದೇನೆ. ಅವರ ಸಂಕೋಚಿತ ಗುಣವೇ ಈ ಮಟ್ಟಿಗೆ ತಂದು ನಿಲ್ಲಿಸಿದೆ. ಹಿರಿಯರಿರಲಿ, ಕಿರಿಯರಿರಲಿ ಅವರೊಂದಿಗೆ ನಡೆದುಕೊಳ್ಳುವ ರೀತಿ ನೋಡಿದರೆ ಗೊತ್ತಾಗುತ್ತದೆ ಅಪು್ಪ ಹೇಗೆ ಅಂತ. ನೋವು ಬಿಟ್ಟು ಹೋಗಿದ್ದಾರೆ. ಎಂದೂ ಮರೆಯದ ನೋವದು. ಎಲ್ಲವನ್ನೂ ಎದುರಿಸಿದ್ದೇವೆ. ಈ ಸಾವನ್ನು ಎದುರಿಸಲು ಆಗಿಲ್ಲ. ಮತ್ತೊಂದು ಜನ್ಮ ಇದ್ದರೆ, ಸಾವಿಲ್ಲದ ಜನ್ಮ ಬರಲಿ ಎಂದು ನಾನು ಕೇಳಿಕೊಳ್ಳುತ್ತೇನೆ.

    | ವಿನೋದ್ ರಾಜ್, ನಟ

     

    ನಾನೇ ಹೋಗಿದ್ದರೆ ಚೆನ್ನಾಗಿರುತ್ತಿತ್ತು…

    ಪುನೀತನದು ಬಹಳ ಪ್ರೀತಿಯಿಂದ ಮಾತನಾಡುವ ಜೀವ. ರಾಘವೇಂದ್ರ ಸ್ಟೋರ್ರ್ಸ್ ಸಿನಿಮಾದಲ್ಲಿ ನಾನೂ ಒಂದು ಪಾತ್ರ ಮಾಡ್ತಿನಿ ಬೇಕಿದ್ರೆ, ಹಾಡೂ ಹಾಡ್ತಿನಿ ಎಂದು ಮಗುವಿನಂತೆ ನನ್ನ ಬಳಿ ಹೇಳಿಕೊಂಡಿದ್ದ. ಮಗಳಿಗೆ ಅಮೆರಿಕದಲ್ಲಿ ಸೀಟ್ ಸಿಕ್ತು, ವಿದೇಶಕ್ಕೆ ಕಳುಹಿಸಿದ್ದೇನೆ ಎಂದು ಖುಷಿ ತೋಡಿಕೊಂಡಿದ್ದ. ಹೆಂಡತಿ ಮಕ್ಕಳೆಂದರೆ ಪ್ರಾಣ. ಅದೆಂಥಾ ಭಾವನಾ ಜೀವಿಯೆಂದರೆ, ಅಪ್ಪನ ತದ್ರೂಪಿ. ತಾನೊಬ್ಬ ಸ್ಟಾರ್ ಅನ್ನೋ ಗರ್ವ ಆತನಿಗೆ ಎಳ್ಳಷ್ಟು ಇರಲಿಲ್ಲ. ಅಂಥ ವ್ಯಕ್ತಿ ಇದೀಗ ಇಲ್ಲವಾಗಿದ್ದಾನೆ. ನಾನು ಹೇಗೆ ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಲಿ. ನನ್ನದು 60ರ ಗಡಿ ದಾಡಿದೆ. ನಾನು ಹೋಗಿದ್ದರೂ ಪರವಾಗಿತ್ತು. ಇನ್ನೂ ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದನೋ, ಸಿನಿಮಾರಂಗದಲ್ಲಿ ಎತ್ತರೆತ್ತರಕ್ಕೆ ಬೆಳೆಯುವ ಆಸೆಗಳನ್ನಿಟ್ಟುಕೊಂಡು, ಪಿಆರ್​ಕೆ ಸಂಸ್ಥೆಯಡಿ ಇನ್ನೂ ಏನೆಲ್ಲ ಮಹತ್ಕಾರ್ಯಗಳನ್ನು ಮಾಡುವ ಆಲೋಚನೆ ಹಾಕಿದ್ದನೋ ನಾ ಕಾಣೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಹೇಳಲ್ಲ. ಅಪು್ಪ ನಮ್ಮ ಜತೆಗೇ ಇರುತ್ತಾನೆ.

    | ಜಗ್ಗೇಶ್, ನಟ

     

    ಕನ್ನಡಕ್ಕೊಬ್ಬರೇ ಅಪ್ಪು

    ಕನ್ನಡ ಚಿತ್ರೋದ್ಯಮದಲ್ಲಿ ಪುನೀತ್ ರಾಜಕುಮಾರ್ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಕನ್ನಡಕ್ಕೊಬ್ಬರೇ ಅಪು್ಪ. ನನ್ನ ಮೊದಲ ಸಿನಿಮಾ ಅವರೊಂದಿಗೆ ಅವರ ಬ್ಯಾನರ್​ನಲ್ಲಿಯೇ ನಟಿಸುವ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದೇನೆ. ಇದೀಗ ಅದೇ ನಟ ಇಲ್ಲ ಎಂದರೆ, ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗಾಗುವ ನೋವು ಎಂಥದ್ದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಪುನೀತ್ ಜತೆ ಹಲವು ಸಿನಿಮಾ ಮಾಡಿದ್ದೇನೆ. ಪ್ರತಿಯೊಂದು ಸಿನಿಮಾ ಶೂಟಿಂಗ್ ವೇಳೆ ಒಂದಷ್ಟು ನೆನಪುಗಳನ್ನು ನೀಡಿ ಹೋಗಿದ್ದಾರೆ. ಡಾ. ರಾಜ್ ಅವರ ಮಗ ಎಂಬ ಸಣ್ಣ ಅಹಂ ಸಹ ಅವರಲ್ಲಿ ಇರಲಿಲ್ಲ. ತಾವಿರುತ್ತಿದ್ದ ಕ್ಯಾರವಾನ್ ಸಹ ಎಷ್ಟೋ ಸಲ ಬಿಟ್ಟುಕೊಟ್ಟಿದ್ದಾರೆ. ಸೆಟ್​ನಲ್ಲಿ ಎಲ್ಲರ ಜತೆಗೆ ಊಟ ಮಾಡಿದ್ದಾರೆ. ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸೆಟ್​ನಲ್ಲಿ ಯಾವತ್ತಿದ್ದರೂ ಹೈಪರ್ ಆಕ್ಟಿವ್. ಒಂದೇ ಒಂದು ದಿನ ಅವರು ಡಲ್ ಆಗಿದ್ದನ್ನು ನಾನು ನೋಡಿಲ್ಲ. ಇತ್ತೀಚೆಗಷ್ಟೇ ನಾನು ಮತ್ತೆ ಕಂಬ್ಯಾಕ್ ಮಾಡಿದ್ರೆ ಅದು ನಿಮ್ಮ ಜತೆ ಮಾತ್ರ ಎಂದು ಹೇಳಿದ್ದೆ. ಅದಕ್ಕೆ ಅವರಿಂದಲೂ ಒಪ್ಪಿಗೆ ಸಿಕ್ಕಿತ್ತು. ಸಿನಿಮಾ ನಿರ್ಮಾಣ ಸಂಸ್ಥೆ ತೆರೆದ ಮೇಲೆ ಹೊಸಬರಿಗಾಗಿಯೇ ಚಿತ್ರ ನಿರ್ಮಾಣ ಶುರುಮಾಡಿದರು. ಯಾರಿಗೂ ಇಲ್ಲ ಎನ್ನದೆ, ಅತಿಥಿ ಪಾತ್ರದಲ್ಲಿ ನಟಿಸಲೂ ಸೈ, ಸಿನಿಮಾಗಳಲ್ಲಿ ಹಾಡಲೂ ಸೈ.. ಎಲ್ಲರಿಗೂ ಕೈ ಜೋಡಿಸೋರು. ಅವರಿಗೆ ರಾಗಿ ಮುದ್ದೆ, ಕೋಳಿ ಸಾರು, ಬಿರಿಯಾನಿಯನ್ನು ತುಂಬ ಎಂಜಾಯ್ ಮಾಡುತ್ತಿದ್ದರು. ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆಯೂ ಅವರಿಗಿತ್ತು. ಇಂಡಸ್ಟ್ರಿಯಲ್ಲಿ ಸ್ಟಾರ್​ಡಮ್ ಹೆಚ್ಚಾದಂತೆ ಜನ ಚೇಂಜ್ ಆಗ್ತಾರೆ. ಆದರೆ, ಅಪು್ಪ ಪ್ರಖ್ಯಾತಿಯ ತುತ್ತ ತುದಿಯಲ್ಲಿದ್ದರೂ ಯಾವತ್ತಿದ್ದರೂ ಬದಲಾಗಲಿಲ್ಲ.

    | ರಮ್ಯಾ, ನಟಿ

     

    ಹ್ಯಾಪಿ ಸೋಲ್, ಮಿಸ್ ಯೂ ಅಪ್ಪು

    ಮಾತು ಹೊರಡುತ್ತಿಲ್ಲ. ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಗೊತ್ತಾಗುತ್ತಿಲ್ಲ. ಇತ್ತೀಚೆಗಷ್ಟೇ ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ಬಂದಿದ್ದರು. ಅವರ ಆಗಮನ ಅದೆಷ್ಟು ಪಾಸಿಟಿವ್ ವೈಬ್ ಸೃಷ್ಟಿಸಿತ್ತೆಂದರೆ, ಅದನ್ನು ಊಹಿಸಲೂ ಅಸಾಧ್ಯ. ವೇದಿಕೆ ಮೇಲೆ ಒಟ್ಟಿಗೆ ಕುಳಿತಿದ್ದನ್ನು ನೋಡಿ ನಮ್ಮಿಬ್ಬರ ಮೊದಲ ಸಿನಿಮಾ ‘ಅಪು್ಪ’ ಚಿತ್ರದ ಡೈಲಾಗ್​ಗಳನ್ನೇ ಕೆಲವರು ಹೇಳಲಾರಂಭಿಸಿದರು. ನಾವೂ ಮತ್ತೆ ಆ ದಿನಗಳಿಗೆ ಹೋಗಿ ಮರಳಬೇಕಾಯಿತು. ಅಪು್ಪ ಜತೆಗಿದ್ದಷ್ಟು ಹೊತ್ತು ಖುಷಿಯ ಬುಗ್ಗೆ ಅವರ ಸುತ್ತಲೂ ಇರುತ್ತಿತ್ತು. ಎಲ್ಲರನ್ನೂ ನಗಿಸುವುದರ ಜತೆಗೆ, ಅವರ ಹೊಸ ಲೋಕಕ್ಕೆ ನಮ್ಮನ್ನೆಲ್ಲ ಕರೆದೊಯ್ಯುತ್ತಿದ್ದರು. ಪ್ರೇಮ್ ಸಹ ಫಿಟ್​ನೆಸ್​ಗೆ ಸದಾ ಅವರ ಉದಾಹರಣೆಯನ್ನ ಕೊಡುತ್ತಿದ್ರು. ಆದರೆ, ಅಷ್ಟೊಂದು ಫಿಟ್ ಆಗಿದ್ದವರೇ ಇದೀಗ ಇಲ್ಲವಾಗಿದ್ದಾರೆ. ಅವರೊಂದಿಗೆ ಕಳೆದ ಖುಷಿಯ ದಿನಗಳನ್ನು ನೆನಪು ಮಾಡಿಕೊಳ್ಳುವುದಷ್ಟೇ ನಮ್ಮ ಕೆಲಸ. ಅವರಿಲ್ಲ ಎಂಬ ಫೋಟೋವನ್ನೂ ನೋಡಲು ನನ್ನಿಂದಾಗದು. ಹ್ಯಾಪಿ ಸೋಲ್. ಮಿಸ್ ಯೂ..

    | ರಕ್ಷಿತಾ ಪ್ರೇಮ್ ನಟಿ

    —————————

    * ಆತ್ಮೀಯ ಗೆಳೆಯನನ್ನು ಕಳೆದುಕೊಂಡೆ…

    ಹಲವು ವರ್ಷಗಳಿಂದ ನನ್ನ ಹಾಗೂ ಅಪು್ಪವಿನ ಒಡನಾಟವಿತ್ತು. ಸ್ಟಾರ್ ನಟನ ಮಗನಾಗಿದ್ದರೂ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಬಿಡುವಿದ್ದಾಗ ಇಬ್ಬರು ಭೇಟಿಯಾಗಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವು. ಮಗುವಿನಂಥ ಮನಸಿನ ಗೆಳೆಯನನ್ನು ಕಳೆದುಕೊಂಡಿದ್ದು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ಅವರು ನಿರೂಪಕರಾಗಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ 7-8 ವರ್ಷಗಳ ಹಿಂದೆ ನಾನು ಕುಟುಂಬ ಸಮೇತ ಭಾಗವಹಿಸಿದ್ದೆ. ಅಲ್ಲಿಂದ ನಬ್ಬಿಬ್ಬರ ಸ್ನೇಹ ಮತ್ತಷ್ಟು ಹತ್ತಿರವಾಯಿತು. ಕೇವಲ ನಾವಿಬ್ಬರಷ್ಟೇ ಅಲ್ಲ, ನಮ್ಮ ಎರಡೂ ಕುಟುಂಬಗಳು ಮತ್ತಷ್ಟು ಹತ್ತಿರವಾದವು. ಹಲವು ಬಾರಿ ಒಂದೇ ವೇದಿಕೆ ಹಂಚಿಕೊಂಡಿದ್ದೇವೆ. ನಾನು ಆರ್​ಸಿಬಿ ತಂಡದ ಪರ ಆಡುವ ದಿನಗಳಲ್ಲಿ ಅಪು್ಪ ಫ್ರಾಂಚೈಸಿ ರಾಯಭಾರಿಯಾಗಿದ್ದರು. ಅವರೊಬ್ಬ ಕೇವಲ ನಟರಲ್ಲ, ಕ್ರೀಡಾಪಟು ಎಂದರೂ ತಪ್ಪಿಲ್ಲ. ಅವರಲ್ಲಿ ಕ್ರೀಡಾಮನೋಭಾವ, ಕ್ರೀಡಾ ಸ್ಪೂರ್ತಿ ಇರುವುದನ್ನು ನಾನು ಕಂಡಿದ್ದೆ. ನಿಜಕ್ಕೂ ಇಷ್ಟು ಬೇಗ ಅಪು್ಪ ಅವರನ್ನು ಕಳೆದುಕೊಳ್ಳುತ್ತೇವೆ ಎಂದುಕೊಂಡಿರಲಿಲ್ಲ. ಕ್ರಿಕೆಟ್ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಕಳೆದ ವರ್ಷ ಮಾಸ್ಕ್ ಜಾಗೃತಿ ಕಾರ್ಯಕ್ರಮವೊಂದರಲ್ಲಿ ಕಡೇ ಬಾರಿಗೆ ಅಪು್ಪ ಅವರನ್ನು ಭೇಟಿಯಾಗಿದ್ದೆ. ಅದೇ ನಮ್ಮ ಕಡೇ ಸಾರ್ವಜನಿಕ ಕಾರ್ಯಕ್ರಮವಾಯಿತು. ಅಲ್ಲಿಂದ ಪರಸ್ಪರ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಅಪು್ಪ ಅಗಲಿಕೆ ವೈಯಕ್ತಿಕವಾಗಿ ಭಾರಿ ನಷ್ಟವುಂಟಾಗಿದೆ. ಒಬ್ಬ ಜೀವದ ಗೆಳೆಯನ್ನು ಕಳೆದುಕೊಂಡಿದ್ದೇನೆ. ಬಹುತೇಕ ಅವರ ಎಲ್ಲ ಚಿತ್ರಗಳನ್ನು ವೀಕ್ಷಿಸಿದ್ದೇನೆ. ಮತ್ತಷ್ಟು ಸಾಮಾಜಿಕ ಕಳಕಳಿ ಚಲನಚಿತ್ರಗಳ ನಿರೀಕ್ಷೆಯಲ್ಲಿದ್ದೇವು, ಅಪು್ಪ ಇಲ್ಲದ ಕನ್ನಡ ಚಲನಚಿತ್ರ ಬಡವಾಗಿದೆ.

    – ಅನಿಲ್ ಕುಂಬ್ಳೆ, ಭಾರತ ತಂಡದ ಮಾಜಿ ನಾಯಕ, ಕೋಚ್

     

    ಪುನೀತ್ ಅವರನ್ನು ನೆನೆಯಬೇಕಷ್ಟೇ…

    ಪ್ರತಿಯೊಬ್ಬ ಕನ್ನಡಿಗನಲ್ಲಿ ಶೋಕ ಮಡುಗಟ್ಟಿದೆ. ಪ್ರತಿಯೊಂದು ಮನೆಯೂ ರಾಜಕುಮಾರನನ್ನು ಕಳೆದುಕೊಂಡಿದೆ. ನನ್ನ ಮತ್ತು ಅವರ ನಂಟು ಬೆಸೆದಿದ್ದೇ ‘ಬೊಂಬೆ ಹೇಳುತೈತೆ..’ ಅನ್ನೋ ಹಾಡು. ಆ ಹಾಡು ಮೆಚ್ಚಿ ನನಗೆ ಮರೆಯಲಾರದ ಬಳುವಳಿಯನ್ನು ನೀಡಿದ್ದರು. ಬೊಂಬೆ ಹೇಳುತೈತೆ.. ಹಾಡನ್ನು ಹಾಡುವಾಗ ಅಣ್ಣಾವ್ರನ್ನು ಮನಸ್ಸಿನಲ್ಲಿ ನೆನೆದು ಹಾಡಿದ್ದೆ. ಇನ್ನು ಮುಂದೆ ಅಪು್ಪ ಅವರನ್ನು ಮನದಲ್ಲಿಟ್ಟುಕೊಂಡು ಈ ಹಾಡನ್ನು ಹಾಡಲು ದುಃಖ ಆಗುತ್ತದೆ. ಪ್ರತಿಯೊಂದು ಸಿನಿಮಾದಲ್ಲಿಯೂ ಅವರಿಗೆ ದನಿಯಾಗಿ ಹಾಡಲು ಅವಕಾಶ ಕೊಟ್ಟರು. ಅದನ್ನು ಮೀರಿ ಇನ್ನೂ ಏನಾದರು ಇದೇ ಎಂದಾದರೆ, ಅದು ಅವರ ಗುಣ. ಸದಾ ಎಲ್ಲರಿಗೂ ಪ್ರೀತಿ ನೀಡುವ ಜೀವವದು.

    | ವಿಜಯ್ ಪ್ರಕಾಶ್, ಗಾಯಕ

    ಚಿಕ್ಕವಯಸ್ಸಿನಿಂದಲೇ ಸೂಪರ್‌ಸ್ಟಾರ್‌

    ಚಿಕ್ಕವಯಸ್ಸಿನಲ್ಲಿಯೇ ಪುನೀತ್​ನನ್ನು ನೋಡಿದ್ದೇವೆ. ತಂದೆಯಂತೆ ಹಾಡುವ ಪ್ರತಿಭೆ. ಚಿಕ್ಕವಯಸ್ಸಿನಲ್ಲಿನ ವ್ಯಕ್ತಿತ್ವ ಸೂಪರ್​ಸ್ಟಾರ್ ಆದ ಮೇಲೂ ಹಾಗೇ ಇತ್ತು. ಅತ್ಯಂತ ಆತ್ಮಿಯತೆಯಿಂದ ಮಾತನಾಡುವ ಹುಡುಗ. ಎಲ್ಲರ ಬಗ್ಗೆ ಗೌರವ ತೋರುವ ಮನೋಭಾವ.

    | ಮಾಳವಿಕಾ ಅವಿನಾಶ್, ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts