ಸಿನಿವಾಣಿ

ಇಂದು ಬೆಳಗ್ಗೆ ಇಷ್ಟದ ಊರಿಗೆ ತೆರಳಲು ಸಿದ್ಧತೆಯಲ್ಲಿದ್ದ ಅಪ್ಪು ಬಾರದೂರಿಗೆ ಹೋಗಿ ಬಿಟ್ಟರೂ...

ಬೆಂಗಳೂರು: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಅಸಂಖ್ಯಾತ ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಇಡೀ ರಾಜ್ಯವೇ ನೆಚ್ಚಿನ ನಟನ ಸಾವಿಗೆ ಕಂಬನಿ ಮಿಡಿಯುತ್ತಿದೆ.

ಇಂದು ಬೆಳಗ್ಗೆ ಮನೆಯಲ್ಲಿ ಜಿಮ್​ ಮಾಡುವಾಗ ಹೃದಯಾಘಾತ ಆಯಿತು. ತಕ್ಷಣ ಅವರನ್ನು ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ಗಂಭೀರವಾದ ಬಳಿಕ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಸಂಖ್ಯಾತ ಅಭಿಮಾನಿಗಳ ಕೋರಿಕೆ ಕೊನೆಗೂ ಫಲಿಸಲಿಲ್ಲ. ಆಸ್ಪತ್ರೆಯಲ್ಲಿ ಪುನೀತ್​ ಕೊನೆಯುಸಿರೆಳೆದಿದ್ದಾರೆ.

ಆಸ್ಪತ್ರೆಯ ಸುತ್ತಮುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ಅನ್ನು ಏರ್ಪಡಿಸಲಾಗಿದ್ದು, ಈಗಾಗಲೇ ಆಸ್ಪತ್ರೆಯಲ್ಲಿ ರಾಜ್​ ಕುಟುಂಬ ಬೀಡು ಬಿಟ್ಟಿದೆ. ಇತ್ತ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ.

ಪುನೀತ್​ ಇಂದು ಬೆಳಗ್ಗೆ ಗಾಜನೂರಿಗೆ ತೆರಳುವುದಾಗಿ ಪುನೀತ್​ ತಿಳಿಸಿದ್ದರು. ಅದರ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಮನೆಯಲ್ಲಿ ವರ್ಕೌಟ್ ಮುಗಿಸಿದ ಬಳಿಕ ಗಾಜನೂರಿಗೆ ಪಯಣ ಬೆಳೆಸಬೇಕಿತ್ತು. ಆದರೆ, ಅಷ್ಟರಲ್ಲೇ ಪುನೀತ್​ಗೆ ಹೃದಯಾಘಾತವಾಗಿದ್ದು, ಇದೀಗ ಎಲ್ಲರನ್ನು ಬಿಟ್ಟು ದೂರದ ಊರಿಗೆ ಪುನೀತ್​ ತೆರಳಿದ್ದು, ಇಡೀ ರಾಜ್ಯವೇ ಕಣ್ಣೀರ ಸಾಗರದಲ್ಲಿ ಮುಳುಗಿದೆ.