ನವದೆಹಲಿ: ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಬಾಲಿವುಡ್ನ ಅತ್ಯಂತ ಪ್ರೀತಿಯ ಜೋಡಿ. ಸಾಮಾಜಿಕ ಜಾಲತಾಣದಲ್ಲಿ ಫ್ಯಾಮಿಲಿ ಫೋಟೋಗಳ ಮೂಲಕ ಸದಾ ಸಂಚಲನ ಮೂಡಿಸುವ ತಾರಾದಂಪತಿ ಆರಂಭದಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ.
ಪ್ರಿಯಾಂಕಾ ಅವರಿಗಿಂತಲೂ ನಿಕ್ ಜೋನಸ್ 11 ವರ್ಷ ಕಿರಿಯರು. ಇದೇ ವಿಚಾರ ಮದುವೆ ಸಮಯದಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಯಾವುದೇ ಟೀಕೆಗೂ ಚಿಂತಿಸದ ಪಿಗ್ಗಿ, 2018ರ ಡಿಸೆಂಬರ್ 1ರಂದು ಅಮೆರಿಕ ಪಾಪ್ ಗಾಯಕ ನಿಕ್ ಜೋನಾಸ್ರನ್ನು ಮದುವೆ ಆಗುವ ಮೂಲಕ ಪ್ರೀತಿಗೆ ವಯಸ್ಸಿನ ಅಂತರ ಮುಖ್ಯವಲ್ಲ ಎಂದು ತೋರಿಸಿದ್ದರು. ಅಲ್ಲದೆ, ಇಬ್ಬರು ಅನೋನ್ಯವಾಗಿ ಜೀವನ ಸಹ ಸಾಗಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡುತ್ತಾ ಬಂದಿದ್ದಾರೆ.
ಆದರೆ, ಇದೀಗ ಪಿಗ್ಗಿ ಮಾಡಿರುವ ಕೆಲಸವೊಂದು ಅಭಿಮಾನಿಗಳಿಗೆ ಶಾಕ್ ನೀಡಿದೆ. ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಜೋನಾಸ್ ಎಂಬ ಸರ್ನೇಮ್ ಅನ್ನು ತೆಗೆದು ಹಾಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಪಿಗ್ಗಿ ಮತ್ತು ನಿಕ್ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಒಟ್ಟಾರೆ, ಪಿಗ್ಗಿ ನಡೆಯಿಂದ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಆದರೆ, ಈವರೆಗೂ ಪಿಗ್ಗಿ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಅವರು ಏನು ಉತ್ತರಿಸುತ್ತಾರೆ ಎಂಬುದರ ಮೇಲೆ ಅಭಿಮಾನಿಗಳ ದೃಷ್ಟಿ ನೆಟ್ಟಿದೆ. ಆದರೆ, ತಮ್ಮ ಹೆಸರಿನ ದಿಢೀರ್ ಬದಲಾವಣೆ ಮುಂದೆ ಆಗಬಹುದಾದ ಬಹುದೊಡ್ಡ ಬದಲಾವಣೆಯ ಮುನ್ಸೂಚನೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಸಮಂತಾ ವಿಚಾರದಲ್ಲೂ ಇದೇ ರೀತಿ ನಡೆದಿರುವುದರಿಂದ ಪಿಗ್ಗಿ ಅಭಿಮಾನಿಗಳ ಆತಂಕ ಹೆಚ್ಚಾಗಿದೆ. ಸಮಂತಾ ಆರಂಭದಲ್ಲಿ ತಮ್ಮ ಸಾಮಾಜಿಕ ಜಾಲತಾಣದಿಂದ ಅಕ್ಕಿನೇನಿ ಸರ್ನೇಮ್ ತೆಗೆದು ಹಾಕಿದ್ದರು. ಬಳಿಕ ಸಮಂತಾ ಮತ್ತು ನಾಗಚೈತನ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಪುಷ್ಠಿ ನೀಡುವಂತಹ ಒಂದಷ್ಟು ಘಟನೆಗಳು ಸಹ ನಡೆದಿತ್ತು. ಕೊನೆಗೆ ಅಕ್ಟೋಬರ್ 2ರಂದು ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್ ಘೋಷಣೆ ಮಾಡಿಯೇ ಬಿಟ್ಟರು. ಪಿಗ್ಗಿ ವಿಚಾರದಲ್ಲೂ ಇದೇ ನಡೆಯುತ್ತಾ ಎಂಬ ಅನುಮಾನ ಹುಟ್ಟುಹಾಕಿದೆ. (ಏಜೆನ್ಸೀಸ್)