ಹೈದರಾಬಾದ್: ತೆಲುಗು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದರೆ ಅದು ಪ್ರಭಾಸ್. ವಯಸ್ಸು 41 ವರ್ಷವಾದರೂ ಮದುವೆ ಆಗದೇ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದು, ಸಿನಿಮಾಗಳಲ್ಲೇ ಮುಳುಗಿ ಹೋಗಿರುವ ಪ್ರಭಾಸ್ ಮದುವೆಯನ್ನೇ ಮರೆತುಬಿಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅಭಿಮಾನಿಗಳು ಪ್ರಭಾಸ್ ಮದುವೆ ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಇದೀಗ ಮದುವೆ ಕುರಿತು ಸ್ವತಃ ಪ್ರಭಾಸ್ ಮಾತನಾಡಿದ್ದಾರೆ.
ಸದ್ಯ ಪ್ರಭಾಸ್ ತಮ್ಮ ನಟನೆಯ ರಾಧೆಶ್ಯಾಮ್ ಚಿತ್ರದ ಪ್ರಚಾರದ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ಗೆ ನಾಯಕಿಯಾಗಿ ಸೌತ್ ಬ್ಯೂಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಇದೇ ಮಾರ್ಚ್ 11ರಂದು ಚಿತ್ರ ತೆರೆ ಕಾಣಲಿದೆ. ಈ ಹಿಂದೆಯೇ ಪ್ರಚಾರ ಆರಂಭಿಸಿದ್ದ ಚಿತ್ರತಂಡ ಟ್ರೈಲರ್ ಕೂಡ ಬಿಡುಗಡೆ ಮಾಡಿತ್ತು. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಕಳೆದ ಜನವರಿಯಲ್ಲಿ ಚಿತ್ರ ತೆರೆಗೆ ಅಪ್ಪಳಿಸಬೇಕಾಗಿತ್ತು. ಆದರೆ, ಕರೊನಾ ಮೂರನೇ ಅಲೆಯಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು.
ಇದೀಗ ಬಿಡುಗಡೆಗೆ ಕೆಲವೇ ದಿನಗಳಿರುವುದರಿಂದ ಚಿತ್ರತಂಡ ಭರ್ಜರಿ ಪ್ರಚಾರ ಆರಂಭಿಸಿದೆ. ಬುಧವಾರ (ಮಾ.2) ಮತ್ತೊಂದು ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಪ್ರಭಾಸ್ ಮಾತನಾಡಿದರು. ಈ ವೇಳೆ ಅವರಿಗೆ ಮದುವೆಯ ಕುರಿತು ಪ್ರಶ್ನೆಯೊಂದು ಎದುರಾಯಿತು. ಅದಕ್ಕೆ ಅವರು ನೀಡಿದ ಉತ್ತರ ಅಭಿಮಾನಿಗಳಿ ಅಚ್ಚರಿ ಉಂಟು ಮಾಡಿದೆ.
ನೀವು ನಿಜ ಜೀವನದಲ್ಲಿ ಲವ್ ಅಫೇರ್ ಮಿಸ್ ಮಾಡಿಕೊಳ್ಳುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಭಾಸ್, ಅನೇಕ ಬಾರಿ ಪ್ರೀತಿಯ ಬಗ್ಗೆ ನನ್ನ ಊಹೆಗಳು ತಪ್ಪಾಗಿವೆ. ಹೀಗಾಗಿ ನಾನಿನ್ನು ಮದುವೆ ಆಗಿಲ್ಲ ಎಂದು ಹೇಳಿದ್ದಾರೆ. ಪ್ರಭಾಸ್ ಅವರ ಈ ಹೇಳಿಕೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದವರು ಪ್ರಭಾಸ್ ಈ ಹಿಂದೆ ಪ್ರೀತಿಯ ಬಲೆಯಲ್ಲಿದ್ದರು. ಬಹುಶಃ ಲವ್ ಫೇಲ್ಯೂರ್ ಆಗಿರಬಹುದೆಂದು ಊಹಿಸುತ್ತಿದ್ದಾರೆ. (ಏಜೆನ್ಸೀಸ್)