ಸಿನಿವಾಣಿ

ಕೋಡ್​​ ಹೇಳಿದ್ರೆ ಮಾತ್ರ ಎಂಟ್ರಿ! ಷರತ್ತುಗಳ ಸರಮಾಲೆ ನಡುವೆ ವಿಕ್ಕಿ-ಕತ್ರಿನಾ ಮದುವೆ

ಮುಂಬೈ: ಬಾಲಿವುಡ್​ನಲ್ಲಿ ಮತ್ತೊಂದು ತಾರಾಜೋಡಿಯ ಅದ್ಧೂರಿ ಮದುವೆಗೆ ಕಲರ್​ಫುಲ್​ ವೇದಿಕೆ ಸಜ್ಜಾಗುತ್ತಿದೆ. ವಿಕಿ ಕೌಶಲ್ ಮತ್ತು ಕತ್ರಿನಾ ಕೈಫ್​ ಮದುವೆ ವಿಚಾರ ಇದೀಗ ಟಾಕ್​ ಆಫ್​ ದಿ ಟೌನ್​ ಆಗಿದ್ದು, ತಾರಾಜೋಡಿಯ ವಿವಾಹಕ್ಕೆ ಸಿನಿ ಉದ್ಯಮದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಭಾರೀ ಭದ್ರತೆ ಏರ್ಪಾಡು ನಡೆಯುತ್ತಿದ್ದು, ಸಾಕಷ್ಟು ವಿಶೇಷತೆಗಳಿಗೆ ಈ ಮದುವೆ ಸಾಕ್ಷಿಯಾಗಲಿದೆ.

ಅತಿಥಿಗಳಿಗಾಗಿ ವಿಶೇಷ ಕೋಡ್‌

ಮದುವೆಯನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲು ಅತಿಥಿಗಳಿಗೆ ರಹಸ್ಯ ಕೋಡ್ಸ್​ಗಳನ್ನು ನೀಡಲಾಗಿದೆ. ವಿಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಹೆಸರಿನಲ್ಲಿರುವ ವರ್ಣಮಾಲೆಗಳನ್ನು ಆಧರಿಸಿ ರಹಸ್ಯ ಸಂಕೇತಗಳನ್ನು ಮಾಡಲಾಗಿದೆ. ಈ ಕೋಡ್​ಗಳನ್ನು ನೀಡಿದರೆ ಮಾತ್ರ ಮದುವೆ ಮಂಟಪಕ್ಕೆ ಪ್ರವೇಶ ಸಿಗಲಿದೆ.

ಇನ್ನು ವಿಕ್ಕಿ ಮತ್ತು ಕತ್ರಿನಾ ಮದುವೆ ಆಗಮಿಸುವ ವಿಶೇಷ ಅತಿಥಿಗಳ ಹೆಸರನ್ನು ಸಹ ಗೌಪ್ಯವಾಗಿ ಇರಿಸಲಾಗಿದೆ. ಎಲ್ಲ ಅತಿಥಿಗಳಿಗೆ ಹೆಸರಿನ ಬದಲಾಗಿ ಕೋಡ್ಸ್​ಗಳನ್ನು ಹೋಟೆಲ್​ ಹಂಚಿಕೆ ಮಾಡಲಿದೆ. ಕೋಡ್ಸ್​ ಪ್ರಕಾರವೇ ಹೋಟೆಲ್​ ರೂಮ್​ ಸೇವೆ, ಭದ್ರತೆ ಮತ್ತು ಬೌನ್ಸರ್​ಗಳನ್ನು ಸಹ ಒದಗಿಸಲಾಗುತ್ತದೆ. ಯಾವ ಅತಿಥಿ ಯಾವ ಕೊಠಡಿಯಲ್ಲಿ ತಂಗಿದ್ದಾರೆ ಎಂಬುದು ಯಾರಿಗೂ ಗೊತ್ತಾಗದಂತೆ ಕೋಡ್ಸ್​ ಅನ್ನು ಅಳವಡಿಸಲಾಗಿದೆ.

ಮದುವೆಗೆ ಬರುವ ಅತಿಥಿಗಳಿಗೆ ಹುಲಿ ಸಫಾರಿ

ತಮ್ಮ ಮದುವೆ ಬರುವ ಅತಿಥಿಗಳಿಗೆ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ವಿಶೇಷ ಹುಲಿ ಸಫಾರಿಯನ್ನು ವಿಕ್ಕಿ-ಕತ್ರಿನಾ ಜೋಡಿ ಆಯೋಜಿಸಿದೆ. ಇದನ್ನು ಕೂಡ ಗೌಪ್ಯವಾಗಿ ಇರಿಸಲಾಗಿದೆ. ಜೋಗಿ ಮಹಲ್​ ಗೇಟ್​ ಮೂಲಕ ಟೈಗರ್​ ಸಫಾರಿಗೆ ಅತಿಥಿಗಳು ತೆರಳಲಿದ್ದಾರೆ. ಅಲ್ಲದೆ, ಜೋಗಿ ಮಹಲ್​ ಕೆರೆಯ ಮುಂದೆ ಇರುವುದರಿಂದ ವಿಐಪಿಗಳು ಪ್ರಕೃತಿ ಸೌಂದರ್ಯವನ್ನು ಕೂಡ ಸವಿಯಬಹುದಾಗಿದೆ.

ಯಾವುದನ್ನು ಬಹಿರಂಗಪಡಿಸದಂತೆ ಷರತ್ತು

ಮದುವೆಗೆ ಬರುವವರು ಯಾವುದೇ ಫೋಟೋಗಳನ್ನು ತೆಗೆಯದಂತೆ ಮತ್ತು ಅದನ್ನು ಆನ್​ಲೈನ್​ನಲ್ಲಿ ಸೋರಿಕೆ ಮಾಡದಂತೆ ಷರತ್ತು ವಿಧಿಸಲಾಗಿದ್ದು, ಅದಕ್ಕೆ ಅತಿಥಿಗಳು ಕೂಡ ಸಹಿ ಮಾಡಬೇಕು. ಫೋಟೋಗ್ರಫಿ ಮಾಡದಿರುವುದು, ಸ್ಥಳದ ಮಾಹಿತಿ ಶೇರ್​ ಮಾಡುವಂತಿಲ್ಲ ಹೀಗೆ ಅನೇಕ ನಿಯಮಗಳನ್ನು ಮದುವೆಯಲ್ಲಿ ಅಳವಡಿಸಲಾಗಿದ್ದು, ಆ ನಿಯಮಗಳು ಈ ಕೆಳಕಂಡಂತಿವೆ...

* ಮದುವೆಯ ಹಾಜರಿಯನ್ನು ಬಹಿರಂಗಪಡಿಸುವಂತಿಲ್ಲ

* ಫೋಟೋಗ್ರಫಿ ಮಾಡುವಂತಿಲ್ಲ

* ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್​ ಮಾಡುವಂತಿಲ್ಲ

* ಸಾಮಾಜಿಕ ಜಾಲತಾಣದಲ್ಲಿ ಲೊಕೇಶನ್​ ಶೇರ್​ ಮಾಡುವಾಗಿಲ್ಲ

* ಮದುವೆ ಮಂಟಪಕ್ಕೆ ಎಂಟ್ರಿಯಾದಾಗಿನಿಂದ ಮದುವೆ ಮುಗಿಸಿ ಹೊರ ಹೋಗುವವರೆಗೂ ಹೊರ ಜಗತ್ತಿನ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ

* ಎಲ್ಲಾ ಫೋಟೋಗಳನ್ನು ವೆಡ್ಡಿಂಗ್ ಪ್ಲ್ಯಾನರ್‌ಗಳ ಅನುಮೋದನೆಯ ನಂತರವೇ ಪ್ರಕಟಿಸಬೇಕು

* ಮದುವೆ ನಡೆಯುವ ಸ್ಥಳದಲ್ಲಿ ವಿಡಿಯೋ ಆಗಲಿ ಅಥವಾ ರೀಲ್ಸ್​ಗಳನ್ನಾಗಲಿ ಮಾಡುವಂತಿಲ್ಲ

ಇನ್ನು ವಿಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅಭಿಮಾನಿಗಳು ನೆಚ್ಚಿನ ತಾರಾಜೋಡಿ ಮದುವೆ ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಅವರ ಮದುವೆಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿವರಗಳನ್ನು ಓದುತ್ತಿದ್ದು, ಮದುವೆ ಸಂಬಂಧಿಸಿದ ಮತ್ತಷ್ಟು ಅಪ್​ಡೇಟ್​ಗಳಿಗಾಗಿ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)