ಸಿನಿವಾಣಿ

ನನ್ನ ಕುಟುಂಬಕ್ಕೆ ತೊಂದ್ರೆಯಾಗೋ ಕೆಲ್ಸನಾ ನಾನ್ಯಾವತ್ತೂ ಮಾಡಲ್ಲ: ಮಾಜಿ ಪತ್ನಿಗೆ ನಾಗಚೈತನ್ಯ ತಿರುಗೇಟು!

ಹೈದರಾಬಾದ್​: ನಟಿ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್​ ಪಡೆದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇಬ್ಬರ ಡಿವೋರ್ಸ್​ ವಿಚಾರವನ್ನು ಈ ಕ್ಷಣದಲ್ಲೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದರ ನಡುವೆ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದು, ಯಾವುದೇ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳದೇ ಸಮಂತಾ ತಮ್ಮ ಚಿತ್ತವನ್ನು ಸಂಪೂರ್ಣ ಸಿನಿಮಾ ಕಡೆ ಹಾಯಿಸಿದ್ದರೆ, ನಾಗಚೈತನ್ಯ ಕೂಡ ಸಿನಿಮಾ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಇದೀಗ ನಾಗಚೈತನ್ಯ ನೀಡಿರುವ ಹೇಳಿಕೆಯೊಂದು ಸಮಂತಾಗೆ ತಿರುಗೇಟು ಕೊಟ್ಟಂತಿದೆ.

ಇತ್ತೀಚೆಗೆ ನಾಗಚೈತನ್ಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ಒಂದು ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಚಿತ್ರದ ಬಗ್ಗೆ ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾಗಚೈತನ್ಯ, ನಾನು ಎಲ್ಲ ರೀತಿಯ ಪಾತ್ರಗಳನ್ನು ಮಾಡಲು ಸಿದ್ಧನಿದ್ದೇನೆ. ಆದರೆ, ನನ್ನ ಕುಟುಂಬದ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ನನ್ನ ಕುಟುಂಬಕ್ಕೆ ತೊಂದರೆಯಾಗುವಂತಹ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ವೈರಲ್​ ವಿಡಿಯೋ ಬಗ್ಗೆ ಕಾಮೆಂಟ್​ ಮಾಡಿರುವ ನೆಟ್ಟಿಗರು ನಾಗಚೈತನ್ಯ ಆಡಿರುವ ಮಾತನ್ನು ಸಮಂತಾಗೆ ತಳುಕು ಹಾಕಿದ್ದಾರೆ. ಅವರು ಹೇಳಿದ ಮಾತುಗಳೆಲ್ಲ ಪರೋಕ್ಷವಾಗಿ ಸಮಂತಾಗೆ ಹೇಳಿದಂತಿದೆ ಎಂದಿದ್ದಾರೆ. ಈ ಹಿಂದೆ ಸಮಂತಾ ಫ್ಯಾಮಿಲಿ ಮ್ಯಾನ್​ ಚಿತ್ರದಲ್ಲಿ ಬೋಲ್ಡ್​ ಸೀನ್​ಗಳಲ್ಲಿ ನಟಿಸಿದ್ದರು. ಇದು ಅಕ್ಕಿನೇನೆ ಕುಟುಂಬಕ್ಕೆ ಇರುಸು-ಮುರುಸು ತೊಂದೊಡ್ಡಿತ್ತು ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ನಾಗಚೈತನ್ಯ ಹೇಳಿರುವ ಮಾತುಗಳಿಂದ ಹಳೆಯ ಘಟನೆಗಳು ಮತ್ತೆ ಮುನ್ನೆಲೆಗೆ ಬಂದಿದೆ. (ಏಜೆನ್ಸೀಸ್​)