ಮಾಸ್ಟರ್ ಸ್ನೇಹಿತ್ ಮತ್ತು ಕುಟುಂಬ 
ಸಿನಿವಾಣಿ

ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ: ಪ್ರಕರಣ ದಾಖಲಾಗ್ತಿದ್ದಂತೆ ಇಡೀ ಕುಟುಂಬ ಎಸ್ಕೇಪ್​

ಬೆಂಗಳೂರು: ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಾಗುತ್ತಿದ್ದಂತೆ ಇಡೀ ಕುಟುಂಬ ಸಮೇತ ಸೌಂದರ್ಯ ಜಗದೀಶ್ ಎಸ್ಕೇಪ್ ಆಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​​ನ ಕ್ಲಬ್ ರಸ್ತೆಯಲ್ಲಿ ನಿನ್ನೆ ಸಂಜೆ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್​, ಬೌನ್ಸರ್​ ಜತೆ ಸೇರಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಪ್ರತಿಷ್ಠಿತ ಖಾಸಗಿ ಶಾಲೆ ಮಾಲೀಕರ ಮನೆ ಕೆಲಸದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಮಹಾಲಕ್ಷ್ಮೀ ಲೇಔಟ್​ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಉದ್ಯಮಿ ಮಂಜುಳಾ ಪುರುಷೋತ್ತಮ್ ಎಂಬವರ ಮನೆ ಕೆಲಸವರಾದ ನೀಲಮ್ಮ ಮತ್ತು ಅವರ ಪುತ್ರಿ ಅನುರಾಧಾ ಮೇಲೆ ಈ ನಟ ಸ್ನೇಹಿತ್​ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ನಿನ್ನೆ ಸಂಜೆ ನೀಲಮ್ಮ ಮತ್ತು ಅನುರಾಧಾ ಹೊರಗಡೆ ಮನೆ ಸ್ವಚ್ಛಗೊಳಿಸುತ್ತಿದ್ದಾಗ ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಮನೆ ಸಿಬ್ಬಂದಿಗೆ ಕಸ ತಾಗಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಬಳಿಕ ಸೌಂದರ್ಯ ಜಗದೀಶ್ ಅವರ ಪುತ್ರ, ನಟನೂ ಆಗಿರುವ ಮಾಸ್ಟರ್ ಸ್ನೇಹಿತ್, ಆತನ ತಾಯಿ ರೇಖಾ ಜಗದೀಶ್ ಮತ್ತು ಭದ್ರತಾ ಸಿಬ್ಬಂದಿ ಸೇರಿ ಕೆಲಸದವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಥರ ಗಲಾಟೆ ಹೊಸದೇನಲ್ಲ. ಈ ಹಿಂದೆಯೂ ಮಾಸ್ಟರ್ ಸ್ನೇಹಿತ್ ಮತ್ತು ಸ್ನೇಹಿತರಿಂದ ಪುಂಡಾಟಿಕೆ ನಡೆದಿದ್ದು, ಇದು ಮೂರನೇ ಸಲ ಎನ್ನಲಾಗಿದೆ. ಈ ಪ್ರಕರಣ ಇದೀಗ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಠಾಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಅನುರಾಧಗೆ ನೊಟೀಸ್ ನೀಡಿದ್ದಾರೆ. ಇಂದು ದೂರುದಾರೆ ಅನುರಾಧಾ ಹೇಳಿಕೆ ಪಡೆಯಲಿದ್ದಾರೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಕುಟುಂಬ ಸಹಿತ ಸೌಂದರ್ಯ ಜಗದೀಶ್ ಎಸ್ಕೇಪ್ ಆಗಿದ್ದಾರೆ. ಮನೆಯವರು ಹಾಗು ಬೌನ್ಸರ್​ಗಳ ಸಹಿತ ಕಾರಿನಲ್ಲಿ ಹೋಗಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. (ದಿಗ್ವಿಜಯ ನ್ಯೂಸ್​)