ಹೈದರಾಬಾದ್: ನಟಿ ನಿತ್ಯಾ ಮೆನನ್ ಹೆಸರು ಹೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹಾಗೂ ಮಾಲಿವುಡ್ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ.
ಇತ್ತೀಚೆಗೆ ನಿತ್ಯಾ ಮೆನನ್ ಅವರ 19 (1)(ಎ) ಸಿನಿಮಾ ಬಿಡುಗಡೆಯಾಗಿದ್ದು, ಮೆಚ್ಚುಗೆ ಗಳಿಸಿದೆ. ಇತ್ತೀಚೆಗೆ ಅವರ ಮದುವೆ ವಿಚಾರದಲ್ಲೂ ವದಂತಿ ಕೇಳಿಬಂದಿತ್ತು. ಆ ವಿಚಾರದ ಬಗ್ಗೆ ಸ್ವತಃ ನಿತ್ಯಾ ಅವರೇ ಸ್ಪಷ್ಟನೆ ನೀಡಿ, ಸದ್ಯಕ್ಕೆ ಮದುವೆ ಯೋಚನೆ ಇಲ್ಲ ಎಂದಿದ್ದರು. ಇದೀಗ ನಿತ್ಯಾ ಅವರು ನೋವಿನ ಸಂಗತಿಯೊಂದನ್ನು ಮಾಧ್ಯಮದ ಮುಂದೆ ತೆರೆದಿಟ್ಟಿದ್ದಾರೆ.
ಸಿನಿಮಾ ವಿಮರ್ಶೆಗಳ ಮೂಲಕವೇ ಖ್ಯಾತಿ ಪಡೆದಿರುವ ಯುವಕನೊಬ್ಬನಿಂದ ತುಂಬಾ ಕಿರುಕುಳ ಅನುಭವಿಸಿರುವುದಾಗಿ ನಿತ್ಯಾ ಹೇಳಿಕೊಂಡಿದ್ದಾರೆ. ಸಹಿಸಲಾಗದಷ್ಟು ಕಿರುಕುಳವನ್ನು ಎದುರಿಸಿದ್ದೇನೆ. ಬಹಳ ಸಮಯದಿಂದಲೂ ಆತ ತುಂಬಾ ಕಿರುಕುಳ ನೀಡುತ್ತಿದ್ದಾನೆ. ಆತ ವೈರಲ್ ಆದ ಬಳಿಕ ಸಾರ್ವಜನಿಕವಾಗಿಯೇ ನನ್ನ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ಬೇಸರ ಹೊರ ಹಾಕಿದರು.
ಆತನ ವಿರುದ್ಧ ದೂರು ನೀಡುವಂತೆ ಅನೇಕರು ಹೇಳಿದರು. ಆದರೆ, ಬೇಡ ಎಂದು ಸುಮ್ಮನಾಗಿದ್ದೇನೆ. ಕಳೆದ 6 ವರ್ಷಗಳಿಂದ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದಾನೆ. ನನ್ನ ಪಾಲಕರನ್ನು ಹೆಸರನ್ನು ಉಲ್ಲೇಖಿಸುವ ಮೂಲಕ ಅವರಿಗೆ ಹಿಂಸೆ ಕೊಟ್ಟಿದ್ದಾರೆ. ತುಂಬಾ ಕ್ರೂರವಾಗಿ ಮಾತನಾಡುತ್ತಿದ್ದಾನೆ. ಈವರೆಗೂ ಆತನ 30ಕ್ಕೂ ಹೆಚ್ಚು ನಂಬರ್ಗಳನ್ನು ಬ್ಲಾಕ್ ಮಾಡಿದ್ದೇನೆ. ಅವನನ್ನು ನಂಬುವವರು ಮತ್ತು ಆತನ ಮಾತುಗಳನ್ನು ನಂಬುವವರು ನಿಜವಾಗಿಯೂ ಮೂರ್ಖರು ಎಂದು ನಿತ್ಯಾ ಅಸಮಾಧಾನಾ ಹೊರಹಾಕಿದ್ದಾರೆ.
ಅಂದಹಾಗೆ ನಿತ್ಯಾ ಹೇಳುತ್ತಿರುವುದು ಸಂತೋಷ್ ವಾರ್ಕಿ ಎಂಬ ಯುವಕನ ಬಗ್ಗೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಈತ ಸುದ್ದಿಯಾಗಿದ್ದ. ನಿತ್ಯಾ ಮೆನನ್ರನ್ನು ತುಂಬಾ ಇಷ್ಟ ಪಡುತ್ತಿರುವ ಸಂತೋಷ್, ಹಿಂದೊಮ್ಮೆ ಮದುವೆ ಆಗಲು ಅನುಮತಿ ಕೇಳಲು ಆಕೆಯ ಮನೆಗೆ ಹೋಗಿದ್ದರಂತೆ. ಇದುವರೆಗೂ ಮದುವೆ ಆಗುತ್ತೇನೆ ಅಂತಿದ್ದ ಸಂತೋಷ್ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಮಾಡಿ, ನಿತ್ಯಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಾನು ಇನ್ನೆಂದಿಗೂ ನಿತ್ಯಾ ಮೆನನ್ ಅವರನ್ನು ಮದುವೆ ಆಗುವುದಿಲ್ಲ. ನಿತ್ಯಾ ಅವರೇ ನನ್ನ ಬಳಿ ಬಂದು ಮದುವೆ ಆಗು ಅಂತಾ ಕೇಳಿದರೆ ನಾನು ಮದುವೆ ಆಗದಿರಲು ನಿರ್ಧಾರ ಮಾಡಿದ್ದೇನೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರೆ, ಅವರು ತಮ್ಮ ಮೊಬೈಲ್ ನಂಬರ್ ಅನ್ನು ಕೊಡಬಹುದಿತ್ತು ಎಂದು ಬರೆದುಕೊಂಡಿದ್ದ.
ತನ್ನ ನಿಜವಾದ ಪ್ರೀತಿಯನ್ನು ಅರಿತುಕೊಳ್ಳದ ನಿತ್ಯಾ ಒಂದಲ್ಲ ಒಮ್ಮೆ ಪಶ್ಚಾತ್ತಾಪ ಪಡುತ್ತಾಳೆ. ಅವಳು ನನಗೆ ಅರ್ಹಳಲ್ಲ ಎಂದು ಪೋಸ್ಟ್ ಮೂಲಕ ನಿತ್ಯಾರನ್ನು ಸಂತೋಷ್ ಟೀಕಿಸಿದ್ದರು.
ಅಂದಹಾಗೆ ಸಂತೋಷ್ ವಾರ್ಕಿ ಕೇರಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿರುವ ಮುಖ. ಅವರು ಮೋಹನ್ಲಾಲ್ ಅಭಿಮಾನಿಯಾಗಿದ್ದು, ಆಗಾಗ ಅವರು ಸಿನಿಮಾಗಳ ಬಗ್ಗೆ ಕೊಡುವ ವಿಮರ್ಶೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ನಿತ್ಯಾ, ಈತನ ಬಗ್ಗೆಯೇ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)