ಸಿನಿವಾಣಿ

ಮದ್ವೆಯಾದ ಕೆಲವೇ ತಿಂಗಳಲ್ಲಿ ಸ್ಫೋಟಗೊಂಡಿತ್ತು ಮನಸ್ತಾಪ: ಸಂಬಂಧಕ್ಕೆ ಕೊನೇ ಮೊಳೆ ಹೊಡೆದ ಕ್ಷಣ ಇದಂತೆ!

ಹೈದರಾಬಾದ್​: ಅಕ್ಟೋಬರ್​ 2ರಂದು ಸಮಂತಾ-ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದಾಗಿನಿಂದ ಒಂದಲ್ಲ ಒಂದು ವದಂತಿಗಳು ಹರಿದಾಡುತ್ತಿವೆ. ಡಿವೋರ್ಸ್​ ಹಿಂದಿನ ಕಾರಣಗಳನ್ನು ತಿಳಿಯುವ ಪ್ರಯತ್ನಗಳು ಈಗಲೂ ನಡೆಯುತ್ತಲೇ ಇದೆ. ಇದೀಗ ಕೆಲವು ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ತಾರಾದಂಪತಿ ಡಿವೋರ್ಸ್​ ಹಿಂದೆ ಶಾಕಿಂಗ್​ ಕಾರಣ ಇದೆ ಎನ್ನಲಾಗುತ್ತಿದೆ. ಆದರೆ, ಈ ಕಾರಣ ಎಷ್ಟು ಸತ್ಯ ಎಂಬುದು ಸಮಂತಾ ಮತ್ತು ನಾಗಚೈತನ್ಯರಿಗೆ ಮಾತ್ರ ಗೊತ್ತಿರುತ್ತದೆ.

ಬೋಲ್ಡ್​ ಪಾತ್ರಗಳಲ್ಲಿ ನಟಿಸುವುದನ್ನು ಬಿಡುವಂತೆ ಅಕ್ಕಿನೇನಿ ಕುಟುಂಬ ಹೇಳಿದರೂ ಕೂಡ ಅದಕ್ಕೆ ಸಮಂತಾ ಒಪ್ಪದಿರುವುದೇ ಡಿವೋರ್ಸ್​ಗೆ ಕಾರಣ ಎನ್ನಲಾಗಿದೆ. ಇದು ಕೇವಲ ಆರೇಳು ತಿಂಗಳಿಂದ ಉಂಟಾಗಿರುವ ಮನಸ್ತಾಪವಲ್ಲ. ಬಹು ವರ್ಷಗಳಿಂದಲೇ ಇಬ್ಬರ ನಡುವೆ ವೈಮನಸ್ಸು ಇತ್ತೆಂದು ಹೇಳಲಾಗಿದೆ. ನಟಿ ಸಮಂತಾ 2017ರ ಅಕ್ಟೋಬರ್​ 7ರಂದು ಸಪ್ತಪದಿ ತುಳಿದಿದ್ದರು. ಇದಾದ ಕೆಲವೇ ತಿಂಗಳಲ್ಲಿ ಅಂದರೆ, 2018ರಲ್ಲಿ ಬಿಡುಗಡೆಯಾದ ರಾಮ್​ಚರಣ್​ ಅಭಿನಯದ ರಂಗಸ್ಥಳಂ ಚಿತ್ರದಲ್ಲಿ ಲಿಪ್​ಲಾಕ್​ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಆಗಲೇ ಅಕ್ಕಿನೇನಿ ಕುಟುಂಬಕ್ಕೆ ಇರುಸು-ಮುರುಸು ಆಗಿತ್ತು.

ಇದರ ನಡುವೆ ತೆರೆಕಂಡ ಸಿನಿಮಾಗಳಲ್ಲಿಯೂ ಸಮಂತಾ ಬೋಲ್ಡ್​ ದೃಶ್ಯಗಳಲ್ಲಿ ನಟಿಸುತ್ತಾ ಬರುತ್ತಿದ್ದರು. ಯಾವಾಗ "ದಿ ಫ್ಯಾಮಿಲಿ ಮ್ಯಾನ್​" ವೆಬ್​ ಸರಣಿಯಲ್ಲಿ ಅಶ್ಲೀಲ ಚಿತ್ರದಲ್ಲಿ ನಟಿಸಿದರೋ ಅಂದೆ ಸಮಂತಾ ತಮ್ಮ ಸಂಬಂಧಕ್ಕೆ ಕೊನೇ ಮೊಳೆ ಹೊಡೆದರು ಎನ್ನಲಾಗಿದೆ. ಏಕೆಂದರೆ, ಈ ದೃಶ್ಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಕ್ಕಿನೇನಿ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಿದ್ದರು.

ಸಾಲು ಸಾಲು ಸಿನಿಮಾಗಳ ಹಸಿ-ಬಿಸಿ ದೃಶ್ಯಗಳಲ್ಲಿ ಸಮಂತಾ ಮೈಚಳಿ ಬಿಟ್ಟು ನಟಿಸುತ್ತಿದ್ದದ್ದು, ಅಕ್ಕಿನೇನಿ ಕುಟುಂಬದ ಕೋಪಕ್ಕೆ ತುಪ್ಪ ಸುರಿದಂತಾಗಿತ್ತು. ಅದರಲ್ಲೂ ಫ್ಯಾಮಿಲಿ ಮ್ಯಾನ್​ ಚಿತ್ರವನ್ನು ನೋಡಿ ಅಕ್ಕಿನೇನಿ ಕುಟುಂಬ ಶಾಕ್​ ಆಗಿತ್ತು. ನಿರಂತರ ಸಲಹೆಯ ನಡುವೆಯೂ ಸಮಂತಾ ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಂಬಂಧದ ಬಿರುಕು ಮತ್ತೆ ಮುಚ್ಚಲಾಗದಷ್ಟು ದೊಡ್ಡದಾಯಿತ ಹೋಯಿತು. ಅಲ್ಲದೆ, ಅಕ್ಕಿನೇನಿ ಕುಟುಂಬಕ್ಕೂ ತಿಳಿಸದೇ ಬೋಲ್ಡ್​ ದೃಶ್ಯಗಳಲ್ಲಿ ನಟಿಸುತ್ತಿದ್ದರು ಎಂದು ತಿಳಿದುಬಂದಿದೆ.

ಅಲ್ಲದೆ, ಇತ್ತೀಚೆಗೆ ನಾಗಚೈತನ್ಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದ ಒಂದು ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಚಿತ್ರದ ಬಗ್ಗೆ ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾಗಚೈತನ್ಯ, ನಾನು ಎಲ್ಲ ರೀತಿಯ ಪಾತ್ರಗಳನ್ನು ಮಾಡಲು ಸಿದ್ಧನಿದ್ದೇನೆ. ಆದರೆ, ನನ್ನ ಕುಟುಂಬದ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ನನ್ನ ಕುಟುಂಬಕ್ಕೆ ತೊಂದರೆಯಾಗುವಂತಹ ಕೆಲಸವನ್ನು ನಾನು ಮಾಡುವುದಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ವೈರಲ್​ ವಿಡಿಯೋ ಬಗ್ಗೆ ಕಾಮೆಂಟ್​ ಮಾಡಿರುವ ನೆಟ್ಟಿಗರು ನಾಗಚೈತನ್ಯ ಆಡಿರುವ ಮಾತನ್ನು ಸಮಂತಾಗೆ ತಳುಕು ಹಾಕಿದ್ದಾರೆ. ಅವರು ಹೇಳಿದ ಮಾತುಗಳೆಲ್ಲ ಪರೋಕ್ಷವಾಗಿ ಸಮಂತಾಗೆ ಹೇಳಿದಂತಿದೆ ಎಂದಿದ್ದಾರೆ. (ಏಜೆನ್ಸೀಸ್​)