ಚೆನ್ನೈ: ‘ಲೇಡಿ ಸೂಪರ್ಸ್ಟಾರ್’ ಬಿರುದಾಂಕಿತ ನಯನತಾರಾ ಮತ್ತು ಜನಪ್ರಿಯ ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕಳೆದ 2 ವರ್ಷಗಳಿಂದ ಬರುತ್ತಲೇ ಇದೆ. ಆದರೆ, ಅದೇಕೋ ಅವರಿಬ್ಬರೂ ಮದುವೆ ಆಗುವ ಘಳಿಗೆ ಇನ್ನೂ ಬಂದಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿರುವಾಗಲೇ ಇತ್ತೀಚೆಗೆ ನಯನತಾರಾ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.
ಕೆಲವೊಂದು ವರದಿಗಳ ಪ್ರಕಾರ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತಹ ಘಟನೆಯು ಸಹ ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ತಾರಾಜೋಡಿ ಇತ್ತೀಚೆಗಷ್ಟೇ ಚೆನ್ನೈನಲ್ಲಿರುವ ಶ್ರೀ ಕಾಳಿಕಾಂಬಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಯನಾತಾರಾ ಹಣೆ ಮತ್ತು ಹಣೆ ಮೇಲ್ಭಾಗದಲ್ಲಿ ಕುಂಕುಮ ಇಟ್ಟುಕೊಂಡು ಜನರ ಎದುರು ಪ್ರತ್ಯಕ್ಷರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಮಹಿಳೆಯರು ಹಣೆಯ ಮೇಲ್ಭಾಗದಲ್ಲಿ ಕುಂಕುಮ ಇಡುವುದು ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾಗಿರುವ ಸೂಚಕವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಯನತಾರಾ ಅವರನ್ನು ನೋಡಿದವರು ಖಂಡಿತ ಅವರು ಮದುವೆಯಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದು ಎಷ್ಟು ಸತ್ಯವೋ ಎಂಬುದನ್ನು ತಾರಾಜೋಡಿಯೇ ಖಚಿತಪಡಿಸಬೇಕಿದೆ.
ತಾಜಾ ಬೆಳವಣಿಗೆ ಏನೆಂದರೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಮಗು ಮಾಡಿಕೊಳ್ಳಲು ಮುಂದಾಗಿದ್ದಾರಂತೆ. ಇದರಲ್ಲಿ ಅಚ್ಚರಿ ಏನಿದೆ ಎಂದು ನೀವು ಕೇಳಬಹುದು. ಆದರೆ, ಆ ಅಚ್ಚರಿ ಏನೆಂದರೆ, ಸ್ಟಾರ್ ಜೋಡಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಮುಂದಾಗಿದ್ದಾರಂತೆ. ಹೀಗೊಂದು ಸುದ್ದಿ ಕಾಲಿವುಡ್ ಗಲ್ಲಿಯೊಳಗೆ ಓಡಾಡುತ್ತಿದೆ. ಈಗಾಗಲೇ ಚೆನ್ನೈನ ಪ್ರಮುಖ ಆಸ್ಪತ್ರೆಯಲ್ಲಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ ಮತ್ತು ಬಾಡಿಗೆ ತಾಯಿಯು ನಿಗದಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಅಚ್ಚರಿಗೆ ಒಳಗಾಗಿದ್ದಾರೆ.
ಇನ್ನೂ ಈ ಸುದ್ದಿಯ ಬಗ್ಗೆ ದಂಪತಿಗಳು ಇನ್ನೂ ಪ್ರತಿಕ್ರಿಯಿಸದಿದ್ದರೂ, ಇದು ನಿಜ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವಾಗಿದ್ದರೆ, ಮಗುವಿಗೆ ಜನ್ಮ ನೀಡಲು ಬಾಡಿಗೆ ತಾಯ್ತನದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವ ಶಾರುಖ್ ಖಾನ್ ಮತ್ತು ಗೌರಿ, ಲಕ್ಷ್ಮಿ ಮಂಚು, ಪ್ರಿಯಾಂಕಾ ಚೋಪ್ರಾ, ಸನ್ನಿ ಲಿಯೋನ್ ಮತ್ತು ಇತರ ಸೆಲೆಬ್ರಿಟಿಗಳ ಪಟ್ಟಿಗೆ ನಯನತಾರಾ ಸೇರುತ್ತಾರೆ.
ಸದ್ಯ ವಿಘ್ನೇಶ್ ಮತ್ತು ನಯನತಾರಾ ಅವರ ಮುಂದಿನ ಚಿತ್ರ ಕಾಥುವಾಕು ರೆಂಡು ಕಾದಲ್ ಬಿಡುಗಡೆಗೆ ಕಾಯುತ್ತಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ನಾಯಕನಾಗಿ ಮತ್ತು ಸಮಂತಾ ಮತ್ತೊಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)