ಮುಂಬೈ: ಬಾಲಿವುಟ್ ಸ್ಟಾರ್ ನಟ ರಣವೀರ್ ಸಿಂಗ್ ಅವರ ಬೆತ್ತಲೆ ಫೋಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಹು ಚರ್ಚಿತ ವಿಷಯವಾಗಿದೆ. ತಮ್ಮ ವಿಭಿನ್ನ ಉಡುಗೆ ಮತ್ತು ಫ್ಯಾಷನ್ನಿಂದಲೇ ಹೆಸರಾಗಿರುವ ರಣವೀರ್, ತಮ್ಮ ಬೆತ್ತಲೆ ಫೋಟೋಶೂಟ್ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಮಹಿಳೆಯರ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಅವರ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ.
ಇದೆಲ್ಲದರ ನಡುವೆ ಜನರ ಕುತೂಹಕಾರಿ ಪ್ರಶ್ನೆಯೊಂದಕ್ಕೆ ಇದೀಗ ಉತ್ತರ ಸಿಕ್ಕಿದೆ. ಯಾವುದು ಆ ಪ್ರಶ್ನೆ ಅಂತೀರಾ, ಬೆತ್ತಲೆ ಫೋಟೋಶೂಟ್ಗಾಗಿ ರಣವೀರ್ ಪಡೆದ ಸಂಭಾವನೆ ಎಷ್ಟು? ಎಂಬುದು. ಮ್ಯಾಗಜಿನ್ ಮುಖಪುಟಕ್ಕಾಗಿ ರಣವೀರ್ ಬೆತ್ತಲೆಯಾಗಿದ್ದು, ಅದಕ್ಕಾಗಿ ಅವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆಗಿಂತಲೂ ಹೆಚ್ಚಿನ ಹಣ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ ಸ್ವಘೋಷಿತ ಸಿನಿಮಾ ವಿಮರ್ಶಕ ಉಮೇರ್ ಸಂಧು ಅವರು ಟ್ವೀಟ್ ಮಾಡಿದ್ದು, ರಣವೀರ್ ಸಿಂಗ್ ಅವರು ಮ್ಯಾಗಜಿನ್ ಮುಖಪುಟಕ್ಕಾಗಿ ಬೆತ್ತಲಾಗಲು ಬರೋಬ್ಬರಿ 55 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ತಿಳಿದುಬಂದಿದೆ. ತಮ್ಮ ಹಿಂದಿನ ಸಿನಿಮಾ 83 ಮತ್ತು ಜೊಯೆಶಾಭಾಯ್ ಜೋರ್ದಾರ್ ಸಿನಿಮಾಗಳ ಸಂಭಾವನೆಗಿಂತಲೂ ಅಧಿಕ ಎಂದು ಹೇಳಲಾಗಿದೆ. ಅಲ್ಲದೆ, 83 ಸಿನಿಮಾವನ್ನು ರಣವೀರ್ ತಮ್ಮದೇ ಬ್ಯಾನರ್ನಲ್ಲಿ ನಿರ್ಮಾಣ ಮಾಡಿದ್ದರು. ಆ ಸಿನಿಮಾದಿಂದ ನಷ್ಟವನ್ನು ಭರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಣವೀರ್ ಬೆತ್ತಲೆ ಫೋಟೋಶೂಟ್ ಭಾರಿ ಸದ್ದು ಮಾಡಿದ್ದಲ್ಲದೆ, ವಿವಾದಕ್ಕೆ ಗುರಿಯಾಗಿದೆ. ಮಹಿಳೆಯರ ಭಾವನೆಗೆ ಧಕ್ಕೆಯಾಗಿರುವ ಆರೋಪದಡಿ ರಣವೀರ್ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 509, 294 ಮತ್ತು ಐಟಿ ಕಾಯ್ದೆ 67 ಎ ಸೆಕ್ಷನ್ ಅಡಿಯಲ್ಲಿ ಮುಂಬೈನ ಚೆಂಬೂರ್ ಠಾಣಾ ಪೊಲೀಸರು ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ.
ಪೂರ್ವ ಮುಂಬೈ ಉಪನಗರ ಮೂಲದ ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಪದಾಧಿಕಾರಿಗಳು ಮತ್ತು ಮಹಿಳಾ ವಕೀಲರು ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದಾರೆ. ರಣವೀರ್ ಅವರು ತಮ್ಮ ಬೆತ್ತಲೆ ಫೋಟೋಗಳ ಮೂಲಕ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಮತ್ತು ಮಹಿಳೆಯರ ನಮ್ರತೆಗೆ ಅಪಮಾನ ಎಸಗಿದ್ದಾರೆ ಎಂದು ಎನ್‌ಜಿಒ ಪದಾಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೆ, ರಣವೀರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಅಂದಹಾಗೆ ರಣವೀರ್ ಅವರು ಮ್ಯಾಗಜಿನ್ ಒಂದರ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ರಣವೀರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ ಮತ್ತು ಪರ-ವಿರೋಧ ಚರ್ಚೆಯನ್ನು ಹುಟ್ಟು ಹಾಕಿದೆ. ಪತ್ನಿ ದೀಪಿಕಾ ಪಡುಕೋಣೆ, ಆಲಿಯಾ ಭಟ್, ನಟ ಅರ್ಜುನ್ ಕಪೂರ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ರಣವೀರ್ ಪರ ಬ್ಯಾಟ್ ಬೀಸಿದ್ದಾರೆ. ಆದರೆ, ಕೆಲವರು ರಣವೀರ್ ನಗ್ನ ಫೋಟೋಶೂಟ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್)