ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯದ "ರತ್ನನ್ ಪ್ರಪಂಚ" ಚಿತ್ರದಲ್ಲಿ ನಾಯಕಿ ಪಾತ್ರ ನಿರ್ವಹಿಸಿದ್ದ ನಟಿ ರೆಬಾ ಮೊನಿಕಾ ಜಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಮ್ಮ ಬಾಯ್ಫ್ರೆಂಡ್ ಜೊಮನ್ ಜೋಸೆಫ್ ಜತೆ ಹೊಸ ಬಾಳ ಪಯಣವನ್ನು ರೆಬಾ ಆರಂಭಿಸಿದ್ದಾರೆ. ಇಬ್ಬರ ಮದುವೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಕುಟುಂಬ, ಸ್ನೇಹಿತರು ಹಾಗೂ ಬಂಧುಬಳಗದವರ ಸಮ್ಮುಖದಲ್ಲಿ ಬೆಂಗಳೂರಿನ ಚರ್ಚ್ ಒಂದರಲ್ಲಿ ಸರಳವಾಗಿ ನೆರವೇರಿದೆ.
ಜೋಮನ್ ಜೋಸೆಫ್ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ವಿಚಾರವನ್ನು ಕಳೆದ ವರ್ಷ ರೆಬಾ ಘೋಷಿಸಿದ್ದರು. ಸುಮಾರು ಒಂದು ವರ್ಷಗಳ ಕಾಲ ಡೇಟಿಂಗ್-ಮೀಟಿಂಗ್ ನಡೆಸಿದ್ದ ಜೋಡಿ, ಇದೀಗ ವೈವಾಹಿಕ ಬಂಧನದ ಮೂಲಕ ಜೀವನದ ಹೊಸ ಇನ್ನಿಂಗ್ಸ್ ಅನ್ನು ಒಟ್ಟಿಗೆ ಪ್ರಾರಂಭಿಸಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ರೆಬಾ ನಿವಿನ್ ಪೌಲಿ ಅಭಿನಯದ "ಜಾಕೊಬಿಂಟೆ ಸ್ವರ್ಗರಾಜ್ಯಂ" ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸೂಪರ್ ಸ್ಟಾರ್ ವಿಜಯ್ ಅಭಿನಯದ ಬಿಗಿಲ್ ಚಿತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಕೊನೆಯದಾಗಿ ಥೊವಿನೋ ಅಭಿನಯದ ಫಾರೆನ್ಸಿಕ್ ಮತ್ತು ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರದಲ್ಲಿ ರೆಬಾ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)