ಸಿನಿವಾಣಿ

ಬಿಗ್​ಬಾಸ್​ ಸೀಸನ್​ 9ರ ಆರಂಭಕ್ಕೂ ಮುನ್ನವೇ ಎಚ್ಚರಿಕೆ ಸಂದೇಶ ರವಾನಿಸಿದ ಕಲರ್ಸ್​ ಕನ್ನಡ!

ಬೆಂಗಳೂರು: ‘ಬಿಗ್ ಬಾಸ್’ನ ಒಂಬತ್ತನೇ ಸೀಸನ್ ಯಾವಾಗ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇತ್ತು. ಆ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಈ ಜನಪ್ರಿಯ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈಗಾಗಲೇ ಬಿಡದಿಯ ಇನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ಬಿಗ್​ಬಾಸ್​ ಮನೆಯ ನವೀಕರಣ ನಡೆಯುತ್ತಿದೆ. ಇಷ್ಟೇ ಅಲ್ಲದೆ, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್​ ಅವರು ಪ್ರೋಮೋ ಶೂಟ್​ ಸಹ ಪೂರ್ಣಗೊಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕಲರ್ಸ್​ ಕನ್ನಡದ ಬಿಜಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಅವರು ಬಿಗ್​ಬಾಸ್​ ಮನೆ ಒಂದು ಭಾಗದ ಫೋಟೋವೊಂದನ್ನು ತಮ್ಮ ಜಾಲತಾಣದಲ್ಲಿ ಶೇರ್​ ಮಾಡಿಕೊಂಡು ನಿರ್ಮಾಣ ಹಂತದಲ್ಲಿದೆ ಎಂದು ಶೀರ್ಷಿಕೆ ನೀಡಿದ್ದರು. ಕಿಚ್ಚ ಸುದೀಪ್​ ಅವರು ಪ್ರೋಮೋ ಶೂಟ್​ನಲ್ಲಿ ಭಾಗಿಯಾಗಿ ಬಂದ ಬಳಿಕ ಅವರು ಸಹ ಟ್ವೀಟ್​ ಮಾಡಿದ್ದಾರೆ. ಬಿಗ್​ಬಾಸ್​ ಹೊಸ ಸೀಸನ್​ಗಾಗಿ ಅತ್ಯಾಕರ್ಷಕ ಪ್ರೋಮೋ ಶೂಟ್​ ಮಾಡಲಾಗಿದೆ. ಇಡೀ ತಂಡದ ಶ್ರಮಕ್ಕೆ ಹಾಗೂ ಈ ಶೂಟ್​ನಲ್ಲಿ ಭಾಗವಹಿಸಿದ್ದ ಎಲ್ಲ ಪ್ರೀತಿಯ ಜನರಿಗೆ ಧನ್ಯವಾದಗಳು. ನೀವೆಲ್ಲ ಆದಷ್ಟು ಬೇಗ ಪ್ರೋಮೋವನ್ನು ಎದುರು ನೋಡಲಿದ್ದೀರಿ. ಇದು ಸೂಪರ್​ ಘೋಷಣೆ ಎಂದಿದ್ದಾರೆ.

ಬಿಗ್​ಬಾಸ್ 9ಕ್ಕೆ​ ಭಾರೀ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಕಲರ್ಸ್​ ಕನ್ನಡ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ. ಬಿಗ್​ಬಾಸ್​ ಕಾರ್ಯಕ್ರಮದ ಹೆಸರನ್ನು ಬಳಸಿಕೊಂಡು ಯಾರೋ ವಂಚಿಸುತ್ತಿರುವ ಆರೋಪ ಕೇಳಿಬಂದಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕಲರ್ಸ್​ ಕನ್ನಡ ಎಚ್ಚರಿಯನ್ನು ನೀಡಿದೆ. ಅದರ ಸಾರಾಂಶ ಈ ಕೆಳಕಂಡಂತಿದೆ.

ಬಿಗ್​ಬಾಸ್​ ಆಕಾಂಕ್ಷಿಗಳ ಗಮನಕ್ಕೆ...

ಬಿಗ್​ಬಾಸ್​ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್​ ಕನ್ನಡವು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್​ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಷನ್​ ನಡೆಸಲಾಗುತ್ತಿಲ್ಲ. ಬಿಗ್​ಬಾಸ್​ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದರೂ ನಿಮ್ಮಿಂದ ಹಣ ಕೇಳಿದರೆ, ತಕ್ಷಣ ಅಂಥವರ ವಿರುದ್ಧ ಪೊಲೀಸರಿಗೆ ದೂರು ಕೊಡಿ. ಪ್ರವೇಶ ಶುಲ್ಕ, ಠೇವಣಿ, ತರಬೇತಿ ಸೇರಿದಂತೆ ಯಾವುದೇ ಹೆಸರಿನಲ್ಲಿ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ. ಎಂಬುದು ನೆನಪಿರಲಿ. ಬಿಗ್​ಬಾಸ್​ ಕುರಿತ ಸರಿಯಾದ ಮಾಹಿತಿಗೆ ಕಲರ್ಸ್​ ಕನ್ನಡ ವಾಹಿನಿ ಅಥವಾ ವೂಟ್​ನ ಅಧಿಕೃತ ಮೀಡಿಯಾ ಹ್ಯಾಂಡಲ್​ಗಳನ್ನು ಮಾತ್ರ ಪರಿಗಣಿಸಿ ಎಂದು ಕಲರ್ಸ್​ ಕನ್ನಡ ಹೇಳಿದೆ.

ಅಂದಹಾಗೆ ಈ ಬಾರಿ ಬಿಗ್​ಬಾಸ್​ ಒಟಿಟಿ ಮತ್ತು ಕಲರ್ಸ್​ ಕನ್ನಡ ವಾಹಿನಿ ಎರಡರಲ್ಲೂ ಪ್ರಸಾರವಾಗಲಿದೆ. ಎರಡರಲ್ಲೂ ಕಿಚ್ಚನದೇ ನಿರೂಪಣೆ ಇರಲಿದೆ. ಈ ತಿಂಗಳ ಅಂತ್ಯಕ್ಕೆ ಪ್ರೋಮೋ ಬಿಡುಗಡೆಯಾಗುವುದ ಸಾಧ್ಯತೆ ಇದೆ. ಆಗಸ್ಟ್​ ಎರಡನೇ ವಾರದಲ್ಲಿ ಒಟಿಟಿಯಲ್ಲಿ ಪ್ರಸಾರವಾಗಲಿದ್ದು, 45 ದಿನಗಳ ಬಳಿಕ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಬಿಗ್​ಬಾಸ್​ ಮನೆಗೆ ಮಾಜಿ ಕ್ರಿಕೆಟಿಗ ವಿನಯ್​ ಕುಮಾರ್​, ನಟ ನವೀನ್​ ಕೃಷ್ಣ, ನಿರ್ದೇಶಕ ರವಿ ಶ್ರೀವಾಸ್ತವ, ನಟ ತರುಣ್​ ಚಂದ್ರ, ಕಿರುತೆರೆ ನಟಿ ನಮ್ರತಾ ಗೌಡ, ನಟ ದಿಲೀಪ್​ ರಾಜ್​, ಹಿರಿಯ ನಟಿ ಪ್ರೇಮಾ, ಸೋಶಿಯಲ್​ ಮೀಡಿಯಾ ಸ್ಟಾರ್​ ಭೂಮಿಕಾ, ನಟಿ ರೇಖಾ ವೇದವ್ಯಾಸ್​, ಮಿಮಿಕ್ರಿ ಗೋಪಿ ಮತ್ತು ಟಿವಿ ನಿರೂಪಕ ಚಂದನ್​ ಶರ್ಮಾ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)