ಸಿನಿವಾಣಿ

ಬಿಗ್​ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಹಿ ಘಟನೆಗೆ ಸಾಕ್ಷಿಯಾದ ಬಿಗ್ ಹೌಸ್​: ನೆಟ್ಟಿಗರ ಆಕ್ರೋಶ

ಮುಂಬೈ: ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಹಿಂದಿಯಲ್ಲಿ ನಿರಂತರವಾಗಿ ಸಾಗುತ್ತಲೇ ಇದೆ. ಈಗಾಗಲೇ 14 ಆವೃತ್ತಿ ಮುಕ್ತಾಯವಾಗಿದ್ದು, 15ನೇ ಆವೃತ್ತಿ ನಡೆಯುತ್ತಿದೆ. ಬಿಗ್​ಬಾಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಗ್​ಬಾಸ್​ ಹೌಸ್​ ಕಹಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ.

ಟಾಸ್ಕ್​ನಲ್ಲಿ ಸೋತಿದ್ದಕ್ಕೆ ಬಿಗ್​ಬಾಸ್​ ಸ್ಪರ್ಧಿಯೊಬ್ಬರು ಮನೆಯೊಳಗೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ವಿಐಪಿ ಟಿಕೆಟ್​ಗಾಗಿ ಮನೆಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅಫ್ಸಾನಾ ಖಾನ್​ ಮಾತ್ರ ಆಯ್ಕೆ ಆಗಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಅಫ್ಸಾನಾ ಚಾಕು ತೆಗೆದುಕೊಂಡು ಕೈ ಕುಯ್ದುಕೊಳ್ಳಲು ಯತ್ನಿಸಿದರು.

ಕರಣ್​ ಕುಂದ್ರಾ, ನಿಶಾಂತ್​ ಭಟ್​, ತೇಜಸ್ವಿ ಪ್ರಕಾಶ್​ ಮತ್ತು ಅಫ್ಸಾನಾ ಖಾನ್​​ ನಾಲ್ವರಲ್ಲಿ ಮೂವರನ್ನು ಮಾತ್ರ ವಿಐಪಿ ಟಿಕೆಟ್​ಗೆ ಬಿಗ್​ಬಾಸ್​ ಮನೆಯ ಕ್ಯಾಪ್ಟನ್​ ಉಮರ್​ ರಿಯಾಜ್​ ಆಯ್ಕೆ ಮಾಡಿದರು. ವಿಐಪಿ ಟಿಕೆಟ್​ ಕಳೆದುಕೊಂಡ ಬೇಸರದಲ್ಲಿ ತಾಳ್ಮೆ ಕಳೆದುಕೊಂಡ ಅಫ್ಸಾನಾ ಪಕ್ಕದಲ್ಲೇ ಇದ್ದ ಚಾಕು ತೆಗೆದುಕೊಂಡು ಕೈ ಕುಯ್ದುಕೊಳ್ಳಲು ಯತ್ನಿಸಿದರು. ಈ ವೇಳೆ ಪಕ್ಕದಲ್ಲೇ ಇದ್ದ ಕ್ಯಾಪ್ಟನ್​ ರಿಯಾಜ್​ ಅದನ್ನು ತಡೆದರು.

ಇಷ್ಟು ದೃಶ್ಯವಿರುವ ಬಿಗ್​ಬಾಸ್​ ಪ್ರೋಮೋ ಇದೀಗ ವೈರಲ್​ ಆಗಿದೆ. ಇದೊಂದು ಪ್ರಚಾರದ ತಂತ್ರವೆಂದು ನೆಟ್ಟಿಗರು ಕಿಡಿಕಾರಿದ್ದಾರೆ. ಅಫ್ಸಾನ ನಡೆಯನ್ನು ಅನೇಕರು ಖಂಡಿಸಿದ್ದಾರೆ. (ಏಜೆನ್ಸೀಸ್​)