ಸಿನಿವಾಣಿ

ಬೀಸ್ಟ್ ಚಿತ್ರ ಫ್ಲಾಪ್​ ಬೆನ್ನಲ್ಲೇ​​ ನಿರ್ಮಾಪಕ ಕಳುಹಿಸಿದ ಗಿಫ್ಟ್​ ನೋಡಿ ಶಾಕ್​ ಆದ ಪೂಜಾ ಹೆಗ್ಡೆ!

ಚೆನ್ನೈ: ಈ ವರ್ಷ ಬಿಡುಗಡೆಯಾದ ಮೂರು ಚಿತ್ರಗಳು ಸೋತರೂ, ಪೂಜಾ ಹೆಗ್ಡೆಗೆ ಕಿಂಚಿತ್ತೂ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಈಗಲೂ ಪೂಜಾಗೆ ಟಾಲಿವುಡ್​ನಲ್ಲಿ ಅಷ್ಟೇ ಬೇಡಿಕೆ ಇದ್ದು, ಇನ್ನೊಂದಿಷ್ಟು ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅದರ ಮೊದಲ ಹಂತವಾಗಿ ಪೂಜಾ, ವಿಜಯ್ ದೇವರಕೊಂಡ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರ ನಡುವೆ ಪೂಜಾಗೆ ತಮ್ಮ ಹಿಂದಿನ ಚಿತ್ರದ ನಿರ್ಮಾಪಕ ಶಾಕ್​ ನೀಡಿದ್ದಾರೆ.

ಪೂಜಾ ಅವರು ಹಿಂದಿನ ಚಿತ್ರ ಬೀಸ್ಟ್​. ತಮಿಳು ನಟ ವಿಜಯ್​ಗೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಕೆಜಿಎಫ್​-2 ಎದುರು ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿತು. ಹೇಳಿಕೊಳ್ಳುವಷ್ಟು ಗಳಿಕೆ ಮಾಡಲಿಲ್ಲ. ಇದರಿಂದ ನಿರ್ಮಾಪಕರ ಜೇಬಿಗೆ ನಷ್ಟವಾಗಿದೆ ಎನ್ನಲಾಗಿದೆ. ಇದೀಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಪೂಜಾ ಹೆಗ್ಡೆ ಸಿಬ್ಬಂದಿಯ ನಿರ್ವಹಣೆಗೆ ಭರಿಸಲಾದ ವೆಚ್ಚದ ಮೊತ್ತವನ್ನು ನಿರ್ಮಾಪಕ ವಾಪಸ್​ ಕೇಳಿದ್ದಾರೆಂದು ತಿಳಿದುಬಂದಿದೆ.

ಬೀಸ್ಟ್​ ಚಿತ್ರದ ಶೂಟಿಂಗ್​ ವೇಳೆ ಪೂಜಾ ಹೆಗ್ಡೆ ಸಿಬ್ಬಂದಿಯಿಂದ ಭಾರಿ ವೆಚ್ಚವಾಗಿದೆಯಂತೆ. ಊಟಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಬಿಲ್​ ನೋಡಿ ನಿರ್ಮಾಪಕರೇ ಶಾಕ್​ ಆಗಿದ್ದಾರೆಂದು ಹೇಳಲಾಗಿದೆ. ಪೂಜಾ ಸಿಬ್ಬಂದಿಯ ಆಹಾರ ಮತ್ತು ನಿರ್ವಹಣೆಯ ಬಿಲ್ ಅನ್ನು ನಿರ್ಮಾಪಕರು ಇದ್ದಕ್ಕಿದ್ದಂತೆ ನೋಡಿ ಶಾಕ್​ ಆಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಬೀಸ್ಟ್​ ಸಿನಿಮಾ ಸೋಲಿನಿಂದ ಭಾರೀ ನಷ್ಟದಲ್ಲಿರುವ ನಿರ್ಮಾಪಕರಿಗೆ ಪೂಜಾ ಸಿಬ್ಬಂದಿಯ ನಿರ್ವಹಣೆ ವೆಚ್ಚವೂ ಗಾಬರಿ ತರಿಸಿದ್ದು, ಬಿಲ್​ಗಳನ್ನು ಪೂಜಾ ಅವರಿಗೆ ಕಳುಹಿಸಿ ನಿರ್ವಹಣಾ ವೆಚ್ಚವನ್ನು ಭರಿಸುವಂತೆ ನಿರ್ಮಾಪಕ ಕೇಳಿದ್ದಾರೆ.

ನಿರ್ಮಾಪಕರು ಕಳುಹಿಸಿದ ಬಿಲ್​ ನೋಡಿ ಪೂಜಾ ಕೂಡ ಶಾಕ್​ ಆಗಿದ್ದಾರೆ. ಅಲ್ಲದೆ, ನಿರ್ವಹಣೆಗೆ ಖರ್ಚಾದ ಮೊತ್ತವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಬಿಲ್​ ಉಳಿಸಿಕೊಂಡು ಮಾಡುವಂಥದ್ದು ಏನಿಲ್ಲ. ನಾನು ಹಣವನ್ನು ಭರಿಸುತ್ತೇನೆ ಎಂದು ಪೂಜಾ ಹೇಳಿದ್ದಾರೆಂದು ತಿಳಿದುಬಂದಿದೆ.

ಬೀಸ್ಟ್​ ಸಿನಿಮಾ ಏಪ್ರಿಲ್​ 13ರಂದು ತರೆಕಂಡಿತು. ಏಪ್ರಿಲ್​ 14ರಂದು ಬಿಡುಗಡೆಯಾದ ಕೆಜಿಎಫ್​ 2 ಎದುರು ಬೀಸ್ಟ್​ ಸಿನಿಮಾ ನಿಲ್ಲಲಿಲ್ಲ. ಈ ಸಿನಿಮಾವನ್ನು ಡಾಕ್ಟರ್​ ಸಿನಿಮಾ ಖ್ಯಾತಿಯ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ವಿಜಯ್​, ಪೂಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)