ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ 8ನೇ ಆವೃತ್ತಿಯು ಕರೊನಾ ಲಾಕ್ಡೌನ್ನಿಂದಾಗಿ 75 ದಿನಗಳಿಗೆ ಮೊಟಕುಗೊಳಿಸುವ ಮೂಲಕ ಕಲರ್ಸ್ ಕನ್ನಡ ವೀಕ್ಷಕರಿಗೆ ಶಾಕ್ ನೀಡಿತ್ತು. ಮತ್ತೆ ಶುರುವಾಗುತ್ತೆ ಎಂಬ ಯಾವ ಸುಳಿವು ಇರಲಿಲ್ಲ. ಇದೀಗ ಕರೊನಾ ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಬಿಗ್ಬಾಸ್ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿದೆ. ಹೌದು. ಇಂದು ಸಂಜೆಯಿಂದಲೇ ಬಿಗ್ಬಾಸ್ ಎರಡನೇ ಇನ್ನಿಂಗ್ಸ್ ಆರಂಭಿಸಲಿದೆ.
ಇಂದು ಸಂಜೆ 12 ಮಂದಿಯನ್ನು ನಿರೂಪಕ ಸುದೀಪ್, ಬಿಗ್ಬಾಸ್ ಮನೆಗೆ ಕಳುಹಿಸಿಕೊಡಲಿದ್ದಾರೆ. ಆಲ್ಫಾಬಿಕಕಲ್ ಆರ್ಡರ್ನಲ್ಲಿ ಸ್ಪರ್ಧಿಗಳು ಮನೆಗೆ ಎಂಟ್ರಿ ನೀಡಲಿದ್ದಾರೆ. ಎರಡನೇ ಇನ್ನಿಂಗ್ಸ್ ಕುರಿತು ಕಲರ್ಸ್ ಕನ್ನಡ ವಾಹಿನಿ ತುಂಬಾ ಪ್ರಮೋಷನ್ ಮಾಡುತ್ತಿದ್ದು, ಕೊನೇ ಸಮಯದಲ್ಲಿ ದಿವ್ಯಾ ಉರುಡುಗ ಅವರ ಪ್ರೋಮೋ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್ಬಾಸ್ ಮನೆಗೆ ಹೋಗಲು ದಿವ್ಯಾ ಸ್ವಂತ ಮನೆಯನ್ನು ಬಿಡುತ್ತಿರುವ ದೃಶ್ಯವಿದೆ.
ದಿವ್ಯಾ ಉರುಡುಗರನ್ನು ಶೋನಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದರೆ, ಪ್ರೋಮೋ ಬೆನ್ನಲ್ಲೇ ವೈಷ್ಣವಿ ಅಭಿಮಾನಿಗಳು ದಿವ್ಯಾ ಅವರ ಹೊಸ ಪ್ರೋಮೋ ಅನ್ನು ಅಣುಕಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ದಿವ್ಯಾ ಅವರ ಹೊಸ ಪ್ರೋಮೋ ಮೇಲೆ ವೈಷ್ಣವಿ ಅವರ ಫ್ಯಾನ್ಸ್ ದಾಳಿ ಮಾಡಿರುವುದು ನೋಡಿದರೆ, ಮುಂದೆ ಮೂರನೇ ಮಹಾಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಅಣುಕಿಸಲಾಗಿದೆ. ಅಲ್ಲದೆ, ಬಿಗ್ಬಾಸ್ನಲ್ಲಿ ದಿವ್ಯಾ ಉರುಡುಗ ಅವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಕಿಡಿಕಾರಿದ್ದು, ದಿವ್ಯಾ ಮತ್ತು ವೈಷ್ಣವಿ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಿದೆ.
ಇನ್ನು ಶೋನಲ್ಲಿ ದಿವ್ಯಾ ಉರುಡುಗ ಮತ್ತು ವೈಷ್ಣವಿ ಮೊದಲ ಇನ್ನಿಂಗ್ಸ್ನಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದರು. ಮನೆಯಿಂದ ಹೊರಬಂದ ನಂತರವೂ ಇಬ್ಬರು ಅಪಾರ ಗಮನವನ್ನು ಮತ್ತು ಖ್ಯಾತಿಯನ್ನು ಪಡೆದಿದ್ದು, ಅವರು ಕೂಡ ಇದನ್ನು ನಿರೀಕ್ಷಿಸಿರಲಿಲ್ಲ. ಇದೀಗ ಮತ್ತೆ ಮನೆಗೆ ಎಂಟ್ರಿ ನೀಡುತ್ತಿದ್ದು ಇಬ್ಬರ ಪೈಪೋಟಿ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. (ಏಜೆನ್ಸೀಸ್)