ಸಿನಿವಾಣಿ

ಫೇಸ್​ಬುಕ್​ ನೋಡ್ತಿದ್ದ ಬಾಹುಬಲಿ ಸಿನಿಮಾ ನಟಿಗೆ ಬಿಗ್​ ಶಾಕ್​! ಲೈಂಗಿಕತೆಯ ಭರವಸೆ ನೆಪದಲ್ಲಿ ನೀಚ ಕೃತ್ಯ

ಹೈದರಾಬಾದ್​: ಸಾಮಾಜಿಕ ಜಾಲತಾಣದ ನಿರಂತರ ಬೆಳವಣಿಗೆಯ ಪರಿಣಾಮ ಇಂದಿನ ಯುವ ಜನಾಂಗ ಅಂತರ್ಜಾಲದಲ್ಲಿ ಹೆಚ್ಚು ಕಾಲವನ್ನು ಕಳೆಯುತ್ತಿದೆ. ಹಲವಾರು ವಿಧದ ಆ್ಯಪ್​ಗಳನ್ನು ನೀವು ಜಾಲತಾಣದಲ್ಲಿ ನೋಡಿರುತ್ತೀರಾ. ಅದರಲ್ಲೂ ಡೇಟಿಂಗ್​ ಆ್ಯಪ್​ಗಳ ಸಂಖ್ಯೆಯೇನು ಕಡಿಮೆ ಇಲ್ಲ. ಬಹುತೇಕ ಡೇಟಿಂಗ್​ ಆ್ಯಪ್​ಗಳಲ್ಲಿ ನಕಲಿ ಪ್ರೊಫೈಲ್​ಗಳನ್ನು ಅಥವಾ ಜಾಲತಾಣಿಗರನ್ನು ಸೆಳೆಯುವುದಕ್ಕಾಗಿ ನಟಿಯರ ಚಿತ್ರಗಳನ್ನು ಬಳಸುತ್ತಾರೆ.

ಆಘಾತಕಾರಿ ವಿಚಾರವೆಂದರೆ ಲೈಂಗಿಕತೆಯ ಭರವಸೆ ನೀಡುವ ಕೆಲವು ಡೇಟಿಂಗ್ ಅಪ್ಲಿಕೇಶನ್‌ಗಳು ಈಗ ಆತಂಕಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಇತ್ತೀಚೆಗೆ ಇಂತಹ ಆ್ಯಪ್​ಗಳಲ್ಲಿ ಬಾಹುಬಲಿ ಸಿನಿಮಾದಲ್ಲಿ ಅಭಿನಯಿಸಿರುವ ನಟಿಯ ಚಿತ್ರಗಳು ಅಪ್​ಲೋಡ್​ ಆಗಿದ್ದು, ನಟಿಯ ಬೇಸರಕ್ಕೆ ಕಾರಣವಾಗಿದೆ.

ಆಶ್ರಿತಾ ವೇಮುಗಂತಿ ನಿಮಗೆ ನೆನಪಿರಬೇಕಲ್ಲವೇ? ಬಾಹುಬಲಿ ಎರಡನೇ ಭಾಗದಲ್ಲಿ ನಟಿ ಅನುಷ್ಕಾ ಅವರ ಅತ್ತಿಗೆ ಪಾತ್ರ ಮಾಡಿದ್ದಾರೆ. ಅಲ್ಲದೆ, ಯಾತ್ರಾ ಸಿನಿಮಾದಲ್ಲಿ ವೈ.ಎಸ್​. ವಿಜಯಮ್ಮಳಾಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಶೇಡಿ ಡೇಟಿಂಗ್ ಅಪ್ಲಿಕೇಶನ್‌ನ ಜಾಹೀರಾತು ಕಾಣಿಸಿಕೊಂಡಿತು, ಆ ಆ್ಯಪ್​ನಲ್ಲಿ ಆಶ್ರೀತಾ ವೇಮುಗಂತಿ ಅವರ ಫೋಟೋವನ್ನು ಪ್ರೊಫೈಲ್ ಚಿತ್ರವಾಗಿ ಇರಿಸಲಾಗಿದೆ. ಇಂತಹ ಹಲವು ಪೋಸ್ಟ್‌ಗಳಿಂದ ಆಘಾತಕ್ಕೊಳಗಾದ ಆಶ್ರಿತಾ, ಇದೀಗ ಕಾನೂನು ಮಾರ್ಗದಲ್ಲಿ ಹೋಗಿ ಆ ಡೇಟಿಂಗ್ ಆಪ್‌ಗಳ ಮೇಲೆ ಕ್ರಮ ಕೈಗೊಳ್ಳಲು ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ಇದೇ ಮಾದರಿಯಲ್ಲಿ ಅನೇಕ ನಟಿಯರ ಚಿತ್ರಗಳನ್ನು ಸಹ ಬಳಸಲಾಗುತ್ತಿದೆ ಮತ್ತು ಅಂತಹ ದುಷ್ಕೃತ್ಯಗಳನ್ನು ತಡೆಯಲು ಕಠಿಣ ಕಾನೂನು ಜಾರಿಯಲ್ಲಿರಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ. (ಏಜೆನ್ಸೀಸ್​)