ಸಿನಿವಾಣಿ

ನನ್ನ ಬಟ್ಟೆ ಹರಿಯಿತು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಕಹಿ ಘಟನೆ ವಿರುದ್ಧ ನಟಿ ಅನಸೂಯ ಆಕ್ರೋಶ

ಹೈದರಾಬಾದ್​: ‘ಪುಷ್ಪ’ ಚಿತ್ರದಲ್ಲಿ ಗಮನಸೆಳೆದ ಕಲಾವಿದರ ಪೈಕಿ ದಾಕ್ಷಾಯಿಣಿ ಪಾತ್ರ ಮಾಡಿರುವ ಅನಸೂಯ ಭಾರದ್ವಾಜ್ ಸಹ ಒಬ್ಬರು. ಮೂಲತಃ ನಟಿ-ನಿರೂಪಕಿಯಾಗಿರುವ ಅನಸೂಯ ತಮ್ಮ ಗ್ಲಾಮರಸ್​ನಿಂದಲೇ ಟಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಅಲ್ಲದೆ, ಆಗಾಗ ವಿವಾದಗಳನ್ನು ಹುಟ್ಟುಹಾಕುತ್ತಿರುತ್ತಾರೆ. ಇತ್ತೀಚೆಗೆ ಅನಸೂಯ ಅವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಹಿ ಅನುಭವ ಆಗಿದ್ದು, ಅದನ್ನು ಟ್ವಿಟರ್​ ಮೂಲಕ ಬಹಿರಂಗಪಡಿಸಿದ್ದಾರೆ.

ಅನಾರೋಗ್ಯಕರ ಶಿಷ್ಟಾಚಾರವನ್ನು ಅಲಯನ್ಸ್​ ಏರ್​ ಪಾಲಿಸುತ್ತಿದೆ. ಬೆಂಗಳೂರಿನಿಂದ ಹೈದರಾಬಾದ್​ಗೆ ಹೊರಡಬೇಕಿದ್ದ ವಿಮಾನ ಸಂಖ್ಯೆ 91517 6 ಗಂಟೆ 55 ನಿಮಿಷಕ್ಕೆ ಹೊರಡುತ್ತದೆ ಎಂದು ವೇಳಾಪಟ್ಟಿಯಲ್ಲಿ ಮುದ್ರಿಸಲಾಗಿದೆ. ಆದರೆ, 6.20ಕ್ಕೆ ಕೊನೆಯ ಕರೆ ಎಂದು ಹೇಳಿ 6.10ಕ್ಕೆ ನಿಲ್ದಾಣಕ್ಕೆ ಓಡುವಂತೆ ಮಾಡಿದರು. ಆದರೆ, ವಿಮಾನ ಹೊರಟಿದ್ದು ಮಾತ್ರ 7.25ಕ್ಕೆ. ಸುಮಾರು ಅರ್ಧ ಗಂಟೆ ಕಾಯಿಸಿದರು.

ವಿಮಾನ ಹತ್ತುವ ಮುನ್ನ ಮಾಸ್ಕ್​ ಇಲ್ಲದಿದ್ದಕ್ಕೆ ನಮ್ಮನ್ನು ಒಳಗಡೆ ಬಿಡದೆ ಗೇಟ್​ನಲ್ಲಿಯೇ ತಡೆದರು. ಮಾಸ್ಕ್​ ಕಡ್ಡಾಯವಲ್ಲ ಎಂದು ಗದರಿದಾಗ ನಮ್ಮನ್ನು ಒಳಗಡೆ ಬಿಟ್ಟರು. ಆದರೆ, ಮಾಸ್ಕ್​ ಧರಿಸದಿದ್ದಕ್ಕೆ ನಮ್ಮನ್ನು ಗೌರವಯುತ ಸೀಟಿನಲ್ಲಿ ಕೂರಿಸುವ ಬದಲು ಪ್ರತ್ಯೇಕ ಸೀಟಿನಲ್ಲಿ ಕೂರಿಸಿದರು. ನಾವು ಇಡೀ ಕುಟುಂಬ ಹೊಗಿದ್ದವು. ಎಲ್ಲರನ್ನು ಬೇರೆ ಬೇರೆ ಸೀಟಿನಲ್ಲಿ ಕೂರಿಸಿದರು. ಆ ಸೀಟು ಸರಿಯಿಲ್ಲದ ಕಾರಣ ನನ್ನ ಬಟ್ಟೆ ಹರಿಯಿತು. ಪ್ರಯಾಣಿಕರನ್ನು ಸರಿಯಾಗಿ ನಡೆಸಿಕೊಳ್ಳಿ ಎನ್ನುವ ಮೂಲಕ ಅಲಯನ್ಸ್​ ಏರ್​ ಸಂಸ್ಥೆಗೆ ಟ್ವೀಟ್​ ಮೂಲಕ ಅನಸೂಯ ತಿಳಿ ಹೇಳಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಭಾರದ್ವಾಜ್ ಇದುವರೆಗೂ ‘ಕ್ಷಣಂ’, ‘ರಂಗಸ್ಥಲಂ’ ಇತ್ತೀಚೆಗಷ್ಟೇ ರಿಲೀಸ್ ಆದ ‘ಪಕ್ಕಾ ಕಮರ್ಷಿಯಲ್’ ಸೇರಿದಂತೆ 15 ಚಿತ್ರಗಳಲ್ಲಿ ನಟಿಸಿದ್ದಾರೆ. ‘ಪುಷ್ಪ ದಿ ರೂಲ್’ಮತ್ತು ‘ರಂಗಮಾರ್ತಾಂಡ’ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. (ಏಜೆನ್ಸೀಸ್)