More

    ಶಶಿಕಲಾ ಇತರರ ವಿರುದ್ಧ ತನಿಖೆಗೆ ಶಿಫಾರಸು; ಜಯಲಲಿತಾ ಸಾವಿನ ಕುರಿತ ತನಿಖಾ ಆಯೋಗದ ವರದಿ ಬಹಿರಂಗ

    ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕಿ ಜೆ ಜಯಲಲಿತಾ ಸಾವಿನ ಕುರಿತ ತನಿಖೆಗೆ ನೇಮಿಸಲಾದ ನ್ಯಾಯಮೂರ್ತಿ ಆಮುಗಸ್ವಾಮಿ ಆಯೋಗವು ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ, ಜಯಲಲಿತಾ ಆಪ್ತೆ ಶಶಿಕಲಾ ಹಾಗೂ ಇತರರ ವಿರುದ್ಧ ತನಿಖೆಗೆ ಶಿಫಾರಸು ಮಾಡಿದೆ. ಇದರೊಂದಿಗೆ, ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಬಿರುಗಾಳಿ ಏಳುವ ಸನ್ನಿವೇಶ ಸೃಷ್ಟಿಯಾಗಿದೆ.

    ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ತನಿಖಾ ವರದಿಯನ್ನು ಮಂಡಿಸಲಾಗಿದೆ. ಶಶಿಕಲಾ, ಮಾಜಿ ಆರೋಗ್ಯ ಸಚಿವ ವಿಜಯಭಾಸ್ಕರ್, ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ವೈದ್ಯ ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ಆಯೋಗವು ಸೂಚಿಸಿದೆ. ಆಗಿನ ಮುಖ್ಯ ಕಾರ್ಯದರ್ಶಿ ರಾಮಮೋಹನ ರಾವ್ ಹಾಗೂ ಇತರ ವೈದ್ಯರ ವಿರುದ್ಧವೂ ತನಿಖೆ ನಡೆಸಬೇಕೆಂದು ಆಯೋಗ ಹೇಳಿದೆ. 2016ರ ಸೆಪ್ಟೆಂಬರ್ 22ರಿಂದ ಜಯಲಲಿತಾ ಆಸ್ಪತ್ರೆಯಲ್ಲಿದ್ದರು. ಕೆಲ ದಿನ ಬಳಿಕ ಅಲ್ಲಿಯೇ ಕೊನೆಯುಸಿರೆಳೆದರು. ಅವರ ಸಾವು ಶಂಕಾಸ್ಪದ ಎಂಬ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದರು. ಅಲ್ಲದೆ, ಅವರಿಗೆ ನೀಡಲಾದ ಚಿಕಿತ್ಸೆ ಕುರಿತಂತೆಯೂ ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಗಳು ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಸ್ಟಾಲಿನ್ ನೇತೃತ್ವದ ಸರ್ಕಾರವು ಈ ಸಮಿತಿಯನ್ನು ನೇಮಿಸಿತ್ತು. ಡಿಎಂಕೆಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಹ, ತನಿಖಾ ಆಯೋಗ ರಚಿಸುವ ಅಂಶ ಪ್ರಸ್ತಾಪಿಸಿತ್ತು.

    ಶಶಿಕಲಾ ಹಾಗೂ ಇತರರ ಕುರಿತು ತನಿಖೆಗೆ ಆದೇಶಿಸುವ ವರದಿಯ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆದುಕೊಳ್ಳಲು ರಾಜ್ಯ ಸಂಪುಟ ನಿರ್ಧರಿಸಿದೆ. ನಿವೃತ್ತ ನ್ಯಾಯಮೂರ್ತಿ ಆಮುಗಸ್ವಾಮಿ ಏಕಸದಸ್ಯ ಆಯೋಗವು ರಚನೆಯಾದ ಐದು ವರ್ಷಗಳ ನಂತರ ಆಗಸ್ಟ್ 27ರಂದು ವರದಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಸಲ್ಲಿಸಿತ್ತು. ಜಯಲಲಿತಾ ಸಾವಿನ ಕಾರಣ ಮತ್ತು ಅವರು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಅನುಸರಿಸಿದ ವೈದ್ಯಕೀಯ ವಿಧಾನಗಳ ಬಗ್ಗೆ ನಾನಾ ವದಂತಿಗಳು ಕೇಳಿಬಂದು ರಾಜಕೀಯ ಕೋಲಾಹಲವೇರ್ಪಟ್ಟಿತ್ತು.

    ಶಿಕ್ಷೆ ಅನುಭವಿಸಿದ್ದ ಶಶಿಕಲಾ: ಶಶಿಕಲಾ ವಿಕೆ ಅವರು ಜಯಲಲಿತಾರ ಒಡನಾಡಿ. ದಶಕಗಳ ಕಾಲದಿಂದ ಜತೆಗೇ ವಾಸಿಸುತ್ತಿದ್ದರು. ಜಯಲಲಿತಾ ಮರಣದ ನಂತರ 2017ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾರನ್ನು ಬಂಧಿಸಲಾಯಿತು. ಈ ಪ್ರಕರಣದಲ್ಲಿ ಜಯಲಲಿತಾ ಮುಖ್ಯ ಆರೋಪಿಯಾಗಿದ್ದರು. ಈ ಪ್ರಕರಣದಲ್ಲಿ ನಾಲ್ಕು ವರ್ಷ ಶಿಕ್ಷೆ ಅನುಭವಿಸಿದ ನಂತರ ಶಶಿಕಲಾ ಕರ್ನಾಟಕದ ಜೈಲಿನಿಂದ ಬಿಡುಗಡೆಗೊಂಡರು. ನಂತರ, ಎಐಎಡಿಎಂಕೆ ನೇತೃತ್ವ ವಹಿಸುವ ಅವರ ಪ್ರಯತ್ನ ಕೈಗೂಡಲಿಲ್ಲ.

    ಶಂಕೆಗೆ ಕಾರಣ: ಶಶಿಕಲಾ ಹಾಗೂ ಇತರರ ವಿರುದ್ಧ ಆಯೋಗ ದೋಷಾರೋಪ ಮಾಡಿದೆ. ಶಶಿಕಲಾ ಹಾಗೂ ಅವರ ಸಂಬಂಧಿಕರು ಜಯಲಲಿತಾ ವಿರುದ್ಧ ಸಂಚು ನಡೆಸಿದರೆಂದು ತಮಿಳು ಪತ್ರಿಕೆಗಳಲ್ಲಿ ಬಂದ ವರದಿಗಳನ್ನು ಆಧರಿಸಿಯೂ ಪರಿಶೀಲನೆ ನಡೆಸಿದೆ. ಜಯಲಲಿತಾ ಪೋಯಸ್ ಗಾರ್ಡನ್ ನಿವಾಸದಿಂದ ಶಶಿಕಲಾ ಅವರನ್ನು ಹೊರಹಾಕಿದ್ದು (2011 ನವೆಂಬರ್​ನಿಂದ 2012 ಮಾರ್ಚ್​ವರೆಗೆ) ಮಾತ್ರ ಬಲವಾದ ಶಂಕೆಗೆ ಆಸ್ಪದ ನೀಡುವಂತಹುದಾಗಿದೆ. ‘ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಶಶಿಕಲಾರಿಂದ ಪತ್ರ ಬರೆಸಿಕೊಂಡ ನಂತರ ಪೋಯಸ್ ಗಾರ್ಡನ್​ಗೆ ವಾಪಸಾಗಲು ಜಯಾ ಅವಕಾಶ ಕೊಟ್ಟರು. ತದನಂತರ ಅವರನ್ನು ದೂರವೇ ಇಟ್ಟಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

    475 ಪುಟಗಳ ವರದಿ: ಜಯಲಲಿತಾ ಅವರು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾದ ಸಂದರ್ಭ, ಅವರಿಗೆ ನೀಡಲಾದ ಚಿಕಿತ್ಸೆ ಮುಂತಾದವುಗಳ ಕುರಿತಂತೆ ಆಯೋಗವು 475 ಪುಟಗಳ ವರದಿಯನ್ನು ಸಿದ್ಧ ಪಡಿಸಿದೆ.

    ಹಲವರ ಸಾಕ್ಷ್ಯ: ಜಯಲಲಿತಾರ ಸೊಸೆ ದೀಪಾ ಮತ್ತು ಸೋದರಳಿಯ ದೀಪಕ್ ಅವರು ಜಯಲಲಿತಾ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಅಪೊಲೊ ಆಸ್ಪತ್ರೆಯ ವೈದ್ಯರು ದೆಹಲಿಯ ಏಮ್ಸ್ ತಜ್ಞರೊಂದಿಗೆ ವಿಡಿಯೊ ಕಾನ್ಪರೆನ್ಸ್ ಮೂಲಕ ಒದಗಿಸಿದ ಚಿಕಿತ್ಸೆಯ ಬಗ್ಗೆ ಸಾಕ್ಷ್ಯ ನೀಡಿದ್ದಾರೆ. ಶಶಿಕಲಾ ಲಿಖಿತ ಹೇಳಿಕೆಯನ್ನು ಸಮಿತಿಗೆ ಸಲ್ಲಿಸಿದ್ದಾರೆ.

    ತಜ್ಞ ವೈದ್ಯರ ಸಲಹೆ ನಿರ್ಲಕ್ಷ್ಯ: ಇಂಗ್ಲೆಂಡ್​ನ ಡಾ. ರಿಚರ್ಡ್ ಬೆಲೆ ಅವರು ಸಲಹೆ ನೀಡಿದರೂ ಜಯಲಲಿತಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯುವ ಪ್ರಯತ್ನವನ್ನು ಏಕೆ ಮಾಡಿಲ್ಲ? ರಾಜ್ಯ ಸರ್ಕಾರದ ಮನವಿಯ ಮೇರೆಗೆ ಅಪೋಲೊ ಆಸ್ಪತ್ರೆಗೆ ಬಂದ ಇಂಗ್ಲೆಂಡ್ ಮತ್ತು ಅಮೆರಿಕದ ಹಿರಿಯ ತಜ್ಞ ವೈದ್ಯರು ಸಲಹೆ ನೀಡಿದರೂ ಆಂಜಿಯೋಪ್ಲಾಸ್ಟಿ ಮಾಡಿಲ್ಲ ಏಕೆ? ಎಂದು ವರದಿಯಲ್ಲಿ ಪ್ರಶ್ನಿಸಲಾಗಿದೆ. ವೈದ್ಯರು ಯಾವುದೋ ಒತ್ತಡಕ್ಕೆ ಒಳಗಾಗಿ ತಮ್ಮ ಗುರಿಯನ್ನು ಈಡೇರಿಸುವ ಉದ್ದೇಶದಿಂದಲೇ ಇದೆಲ್ಲವನ್ನು ಮುಂದೂಡುತ್ತ ಬಂದರು. ಈ ಕಾರಣಗಳಿಗಾಗಿ ತನಿಖೆ ನಡೆಯಬೇಕೆಂದು ಆಯೋಗ ಹೇಳಿದೆ.

    ಸುಳ್ಳು ಹೇಳಿದ ಆಸ್ಪತ್ರೆ ಮುಖ್ಯಸ್ಥರು: ಜಯಲಲಿತಾ ಸಾವಿನ ಸಮಯದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾ. ರಾಮಮೋಹನ ರಾವ್ ಸಹ ತಪ್ಪಿತಸ್ಥರು ಎಂದು ವರದಿ ಹೇಳಿದೆ. ಅಂದಿನ ಆರೋಗ್ಯ ಸಚಿವ ವಿಜಯಭಾಸ್ಕರ್ ವಿರುದ್ಧವೂ ತೀವ್ರ ಅವಲೋಕನಗಳನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಅಪೊಲೊ ಆಸ್ಪತ್ರೆ ಅಧ್ಯಕ್ಷ ಡಾ. ಪ್ರತಾಪ್ ರೆಡ್ಡಿ ಅವರು ಜಯಲಲಿತಾ ಆರೋಗ್ಯ ಸ್ಥಿತಿಯ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆಂದೂ ವರದಿ ಹೇಳಿದೆ.

    ಮಾಜಿ ಸಿಎಂ ಪನ್ನೀರ್​ಸೆಲ್ವಂ ಬೇಡಿಕೆ: ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸುವಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್​ಸೆಲ್ವಂ ಮನವಿ ಮಾಡಿದ್ದರು. ಇದು ನ್ಯಾ. ಆಮುಗಸ್ವಾಮಿ ಆಯೋಗ ರಚನೆಗೆ ಕಾರಣವಾಯಿತು. 2016ರ ಸೆಪ್ಟೆಂಬರ್ 22ರಂದು ಜಯಲಲಿತಾ ಆಸ್ಪತ್ರೆಗೆ ದಾಖಲಾದ ಸಂದರ್ಭಗಳು, ಅವರ ಆರೋಗ್ಯ ಸ್ಥಿತಿ, 2016ರ ಡಿಸೆಂಬರ್ 5ರವರೆಗೆ ನಿಧನರಾಗುವವರೆಗೆ ಅವರಿಗೆ ನೀಡಿದ ಚಿಕಿತ್ಸೆ ಕುರಿತಂತೆ ವಿಚಾರಣೆ ನಡೆಸಲು ಆಯೋಗವನ್ನು ನೇಮಕ ಮಾಡಲಾಗಿತ್ತು.

    ಸಿಬಿಐ ತಂಡ ಬರ್ಖಾಸ್ತು

    ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ಗಾಗಿ ರಚಿಸಲಾಗಿದ್ದ ಸಿಬಿಐನ ಬಹುಶಿಸ್ತೀಯ ಮೇಲ್ವಿಚಾರಣಾ ಏಜೆನ್ಸಿಯನ್ನು (ಎಂಡಿಎಂಎ) ಬರ್ಖಾಸ್ತುಗೊಳಿಸಲಾಗಿದೆ. ರಾಜೀವ್ ಹತ್ಯೆ ಹಿಂದಿನ ಪಿತೂರಿ ಕುರಿತ ವಿಸõತ ತನಿಖೆಗಾಗಿ 1998ರಲ್ಲಿ ಇದನ್ನು ರಚಿಸಲಾಗಿತ್ತು. ಈ ಏಜೆನ್ಸಿಯಲ್ಲಿ ಸಿಬಿಐನ ಬೇರೆ ಬೇರೆ ವಿಭಾಗಗಳ ಹಿರಿಯ ಅಧಿಕಾರಿಗಳು ಇದ್ದರು. ಆದರೆ, ಮಹತ್ವದ ಯಾವುದೇ ಬೆಳವಣಿಗೆ ಏಜೆನ್ಸಿ ಸಾಧಿಸಲಿಲ್ಲ. 1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದ ರಾಜೀವ್ ಗಾಂಧಿ ಅವರನ್ನು ಎಲ್​ಟಿಟಿಇ ಉಗ್ರರು ಆತ್ಮಾಹುತಿ ದಾಳಿಯ ಮೂಲಕ ಹತ್ಯೆಗೈದಿದ್ದರು.

    ‘ಕಾಂತಾರ’ ಭರ್ಜರಿ ಯಶಸ್ಸು; ಕುತೂಹಲ ಕೆರಳಿಸಿದೆ ಇವರಿಬ್ಬರ ಮೌನ!

    ನ್ಯಾಯಾಧೀಶರು ಕೇಸ್ ಇತ್ಯರ್ಥಕ್ಕಿಂತ ಹೆಚ್ಚು ಜಡ್ಜ್​ಗಳ ನೇಮಕದಲ್ಲಿ ಕಾಲ ಕಳೆಯುತ್ತಿದ್ದಾರೆ: ಕಾನೂನು ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts