ಹೈದರಾಬಾದ್: ಟಾಲಿವುಡ್ನ ಜನಪ್ರಿಯ ನಿರೂಪಕಿ ಹಾಗೂ ನಟಿ ಅನಸೂಯ ಭಾರದ್ವಜ್ ಅವರು ತಮ್ಮ ಕುರಿತು ಪ್ರಕಟವಾದ ಸುದ್ದಿ ಒಂದ ಮೇಲೆ ಗರಂ ಆಗಿದ್ದಾರೆ. ವರದಿಯಲ್ಲಿ ಅವರ ವಿರುದ್ಧ ಅವಹೇಳನಕಾರಿಯಾದ ಬರವಣಿಗೆ ಇಲ್ಲ. ಆದರೂ, ಅವರು ಗರಂ ಆಗಲು ಒಂದು ಕಾರಣವಿದೆ. ಅದು ಏನಂತಾ ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ.
ಅನಸೂಯ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸುವ ಅನಸೂಯ, ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಅವರು ಬಿಳಿ ಬಣ್ಣದ ಸೀರೆಯನ್ನುಟ್ಟು ಮಾಡಿಸಿರುವ ಫೋಟೋವನ್ನು ಹಂಚಿಕೊಂಡಿದ್ದರು.
ಫೋಟೋಗಳ ಕುರಿತು ವೆಬ್ಸೈಟ್ ಒಂದು ಸುದ್ದಿಯನ್ನು ಪ್ರಕಟಿಸಿತ್ತು. ಬರವಣಿಗೆಯಲ್ಲಿ ಏನು ತಪ್ಪಿರಲಿಲ್ಲ ಮತ್ತು ಅವಹೇಳನವೂ ಇರಲಿಲ್ಲ. ಆದರೆ, ಸಂಖ್ಯೆಯೊಂದರ ಎಡವಟ್ಟು ಅನಸೂಯ ಕೋಪಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಹುಡುಗಿಯ ವಯಸ್ಸು ಕೇಳಬಾರದು ಅಂತಾರೆ. ಆದರೆ, ವರದಿಯಲ್ಲಿ ಅನಸೂಯ ವಯಸ್ಸನ್ನು ಉಲ್ಲೇಖಿಸಿದ್ದಾರೆ. ಇಷ್ಟೇ ಆಗಿದ್ದರೇ ಏನು ಆಗುತ್ತಿರಲಿಲ್ಲ. ಆದರೆ, ಅವರ ವಯಸ್ಸಿನ ಅಂಕಿಯನ್ನು ಹೆಚ್ಚು ಮಾಡಿರುವುದು ಅನಸೂಯ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅನಸೂಯ ನನಗೆ 40 ವರ್ಷವಲ್ಲ ಜಸ್ಟ್ 36. ವಯಸ್ಸಾಗುವುದು ಮತ್ತು ಬೆಳೆಯುವುದು ಸಾಮಾನ್ಯ ವಿಷಯ. ನನ್ನ ವಯಸ್ಸನ್ನು ಹೇಳಲು ನಾನು ನಾಚಿಕೆಪಡುವುದಿಲ್ಲ. ಆದರೆ, ಸುದ್ದಿ ಬರೆಯುವಾಗ ಖಚಿತವಾದ ಮಾಹಿತಿ ಕೊಡಿ ಮತ್ತು ಸ್ವಲ್ಪ ಸಭ್ಯವಾಗಿ ಹೇಳಿದರೆ ಚೆನ್ನಾಗಿರುತ್ತದೆ. ಏಕೆಂದರೆ ಪತ್ರಿಕೋದ್ಯಮ ಒಂದು ಅಸ್ತ್ರ. ಸರಿಯಾಗಿ ಮಾಡದಿದ್ದರೆ ಹಿನ್ನಡೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಮಿಂಚು ಹರಿಸಿರುವ ಅನಸೂಯ ಇತ್ತೀಚೆಗೆ ಬಿಡುಗಡೆಯಾದ ರವಿತೇಜ ಅಭಿನಯದ ಖಿಲಾಡಿ ಚಿತ್ರದಲ್ಲಿ ಸಖತ್ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)