ಸಿನಿವಾಣಿ

ಲಿವಿಂಗ್‌ ಟುಗೆದರ್​ನಲ್ಲಿದ್ದ ಕಿರುತೆರೆ ಯುವನಟಿ ಪಲ್ಲವಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕೋಲ್ಕತ: ಬಂಗಾಳಿ ಯುವನಟಿ ಪಲ್ಲವಿ ದೇ ಮೃತದೇಹ ಕೋಲ್ಕತದ ಗರ್ಫಾದಲ್ಲಿರುವ ಆಕೆಯ ಫ್ಲ್ಯಾಟ್​ನಲ್ಲಿ ಭಾನುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮೃತ ಪಲ್ಲವಿ ಬಂಗಾಳದ ಪ್ರಖ್ಯಾತ ಕಿರುತೆರೆ ಕಲಾವಿದೆ. ರೇಶಮ್ ಜಾನ್ಪಿ, ಆಮಿ ಸಿರಾಜೆರ್ ಬೇಗಂ ಮತ್ತು ಮೊನ್ ಮನೆ ನಾ ಧಾರವಾಹಿಗಳಲ್ಲಿ ನಟಿಸಿದ್ದು, ಪಲ್ಲವಿ ಸಾವಿಗೆ ಬಂಗಾಳಿ ಕಿರುತೆರೆ ಬಳಗ ಕಂಬನಿ ಮಿಡಿದಿದೆ.

ಮಾಧ್ಯಮ ವರದಿಗಳ ಪ್ರಕಾರ, ಪಲ್ಲವಿ ದೇ ಅವರು ಶಾಗ್ನಿಕ್ ಚಕ್ರವರ್ತಿ ಎಂಬುವರ ಜತೆ ಲಿವಿಂಗ್​ ಟುಗೆದರ್​ ರಿಲೇಶನ್​ನಲ್ಲಿದ್ದರು. ಇಬ್ಬರು ಡೇಟಿಂಗ್ ನಡೆಸುತ್ತಿದ್ದರು ಎಂದು ಶಾಗ್ನಿಕ್ ಅವರ ತಾಯಿ ಹೇಳಿದ್ದಾರೆ. ಎಲ್ಲ ಪಾಲಕರಂತೆಯೇ ಶಾಗ್ನಿಕ್​ ಅವರ ತಾಯಿಯು ಕೂಡ ಇಬ್ಬರ ಲಿವಿಂಗ್​ ಟುಗೆದರ್​ ಪರಿಕಲ್ಪನೆಯ ಬಗ್ಗೆ ಅತೃಪ್ತಿ ಹೊಂದಿದ್ದರು. ಆದರೆ ಸ್ವಂತ ಆಯ್ಕೆಗಳನ್ನು ಗೌರವಿಸುವ ಉದ್ದೇಶದಿಂದ ಮಗನಿಗೆ ಸ್ವಾತಂತ್ರ್ಯ ನೀಡಿದ್ದರಂತೆ.

ಯುವನಟಿ ಪಲ್ಲವಿ ಏಕೆ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಂಡರು ಅಥವಾ ಅವರ ಸಾವಿನಲ್ಲಿ ಏನಾದರೂ ಸಂಚು ಅಡಗಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನು ಪ್ರಕ್ರಿಯೆಗಾಗಿ ಮೃತದೇಹವನ್ನು ಎಂಆರ್ ಬಂಗೂರ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ನಡೆದ ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಮತ್ತು ದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತು ಪತ್ತೆಯಾಗಿಲ್ಲ.

ಇನ್ನು ಪೊಲೀಸರು ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಪ್ರಕರಣ ಎಂದು ಸಂಶಯ ವ್ಯಕ್ತಪಡಿಸಿದ್ದರೂ, ಈ ಪ್ರಕರಣದಲ್ಲಿ ಏನಾದರೂ ಸಂಚು ನಡೆದಿರಬಹುದಾ ಎಂಬ ಅನುಮಾನವನ್ನುಅವರು ತಳ್ಳಿಹಾಕಿಲ್ಲ. ಏಕೆಂದರೆ ಪಲ್ಲವಿ ಕುಟುಂಬಸ್ಥರು ಈಗಾಗಲೇ ಇದು ಕೊಲೆ ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. (ಏಜೆನ್ಸೀಸ್​)