More

    ಸಿಐಡಿ ಬಲೆಗೆ ಇನ್​ಸ್ಪೆಕ್ಟರ್: 545 ಎಸ್​ಐ ನೇಮಕಾತಿ ಅಕ್ರಮ ಪ್ರಕರಣ; ಮತ್ತೊಬ್ಬ ಅಭ್ಯರ್ಥಿ ಬಂಧನ

    ಬೆಂಗಳೂರು: ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ನೇಮಕಾತಿ ವಿಭಾಗದ ಬಂಧಿತ ಡಿವೈಎಸ್​ಪಿ ಶಾಂತಕುಮಾರ್ ಆಪ್ತ ಸಿಎಆರ್ ಇನ್​ಸ್ಪೆಕ್ಟರ್ ಬಸವರಾಜು ಮತ್ತು ಅಭ್ಯರ್ಥಿ ನಾರಾಯಣ ಬಂಧಿತರು. ಬಂಧಿತರ ವಿಚಾರಣೆ ವೇಳೆ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ. ಬೆಂಗಳೂರು ನಗರದ ಪರೀಕ್ಷಾ ಕೇಂದ್ರಗಳಲ್ಲಿ ಒಎಂಆರ್ ಶೀಟ್ ತಿದ್ದಿರುವ ಆರೋಪದ ಮೇಲೆ ಹೈಗ್ರೌಂಡ್ಸ್ ಠಾಣೆಯಲ್ಲಿ 22 ಅಭ್ಯರ್ಥಿಗಳ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿತ್ತು. ಇದರ ಆಧಾರದ ಮೇಲೆ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳು ಮತ್ತು ನೇಮಕಾತಿ ವಿಭಾಗದ ಅಧಿಕಾರಿ, ಸಿಬ್ಬಂದಿಯನ್ನು ಬಂಧಿಸಿದ್ದರು. ಪ್ರಮುಖವಾಗಿ ನೇಮಕಾತಿ ವಿಭಾಗದ ಎಡಿಜಿಪಿ ಶಾಂತಕುಮಾರ್ ಬಂಧಿಸಿ ವಿಚಾರಣೆ ನಡೆಸಿ ಬ್ಯಾಂಕ್ ಖಾತೆಗಳ ವಹಿವಾಟ ಪರಿಶೀಲನೆ ನಡೆಸಿದಾಗ ಇನ್​ಸ್ಪೆಕ್ಟರ್ ಬಸವರಾಜು ಸುಳಿವು ಲಭ್ಯವಾಗಿದೆ. ನೌಕರಿ ಕೊಡಿಸುವ ಭರವಸೆ ಕೊಟ್ಟು ಶಾಂತಕುಮಾರ್ ಪರವಾಗಿ ಅಭ್ಯರ್ಥಿಗಳಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜಾಮೀನಿಗೆ ಅಭ್ಯರ್ಥಿಗಳ ಅರ್ಜಿ: ಅಕ್ರಮ ನೇಮಕಾತಿಯಲ್ಲಿ ಬಂಧನಕ್ಕೆ ಒಳಗಾಗಿರುವ ಇಬ್ಬರು ಅಭ್ಯರ್ಥಿಗಳು, ಜಾಮೀನು ಕೋರಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ, ಈಗಾಗಲೆ 11 ಮಂದಿ ಅರ್ಜಿ ಸಲ್ಲಿಸಿದ್ದು, ಸೋಮವಾರ ಕೋರ್ಟ್ ನಲ್ಲಿ ಅಭ್ಯರ್ಥಿಗಳ ಪರ ವಕೀಲರು ವಾದ ಮಂಡಿಸಿದ್ದಾರೆ. ಇದಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಬಾಕಿ ಉಳಿದಿದ್ದು, ಕೋರ್ಟ್ ವಿಚಾರಣೆ ಮುಂದೂಡಿದೆ.

    ಪ್ರಧಾನಿಗೆ ರಕ್ತದಲ್ಲಿ ಪತ್ರ: 545 ಎಸ್​ಐ ನೇಮಕಾತಿ ರದ್ದುಪಡಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ನೊಂದ ಅಭ್ಯರ್ಥಿ, ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆದು ನ್ಯಾಯ ಕೋರಿದ್ದಾನೆ. ಎರಡು ಪುಟಗಳ ಅನಾಮಧೇಯ ಹೆಸರಿನಲ್ಲಿರುವ ಈ ಪತ್ರವು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ನನ್ನ ಕೊನೆಯ ಆಸೆ ಪಿಎಸ್​ಐ ಅಕ್ರಮದಲ್ಲಿ ಮೋಸಕ್ಕೆ ಒಳಗಾಗಿರುವರಿಗೆ ನ್ಯಾಯ ಕೊಡಬೇಕು. ಅನ್ಯಾಯ ಮಾಡಿದವರನ್ನು ಜೈಲಿಗೆ ಹಾಕಿ ಯಾರ ನಿಯತ್ತಾಗಿ ಪರೀಕ್ಷೆ ಬರೆದಿದ್ದಾರೋ ಅವರಿಗೆ ಮರು ಪರೀಕ್ಷೆ ನಡೆಸದೆ ಆಯ್ಕೆ ಮಾಡಿ. 2021ರ ಎಫ್​ಡಿಎನಲ್ಲಿ ಸಹ ಹಗರಣ ಆಗಿದೆ. ಈ ಬಗ್ಗೆ ಸಹ ತನಿಖೆಯಾಗಬೇಕು. ನಿಮ್ಮ ಮೇಲೆ ನಂಬಿಕೆ ಇದೆ ಮೋದಿಜೀ. ನೀವು ಕೆಲಸ ಮಾಡದೆ ಹೋದರೆ ನಾವು ಸಮಾಜದಲ್ಲಿ ಭಯಂಕರ ಕೆಟ್ಟವರಾಗಿ ಇರಬೇಕಾಗುತ್ತದೆ’ ಎಂದು ಪತ್ರದಲ್ಲಿ ಅಭ್ಯರ್ಥಿ ಅಲವತ್ತುಕೊಂಡಿದ್ದಾನೆ. ಇನ್ಮುಂದೆ ಯಾವುದೇ ಸರ್ಕಾರಿ ಹುದ್ದೆಯ ಪರೀಕ್ಷೆ ಬರೆಯುವುದಿಲ್ಲ. ನಾವು 8 ಜನರಿದ್ದೇವೆ. ನನ್ನ ರಕ್ತದಿಂದ ಈ ಪತ್ರ ಬರೆದಿದ್ದೇನೆ ಮೋದಿಜೀ’ ಎಂದು ಆತ ಹೇಳಿದ್ದಾನೆ.

    ಪೊಲೀಸ್ ನೇಮಕ ಜವಾಬ್ದಾರಿ ಕಮಲ್ ಪಂತ್ ಹೆಗಲಿಗೆ

    ಬೆಂಗಳೂರು: ರಾಜ್ಯ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಅಕ್ರಮ ವ್ಯವಹಾರದಿಂದ ಆಗಿರುವ ಡ್ಯಾಮೇಜ್​ನಿಂದ ಹೊರಬರಲು ಸರ್ಕಾರ ಮುಂದಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರನ್ನು ನೇಮಕಾತಿ ವಿಭಾಗದ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

    ನೇಮಕಾತಿ ವಿಭಾಗದ ಹುದ್ದೆಯನ್ನು ಎಡಿಜಿಪಿ ಹುದ್ದೆಯಿಂದ ಡಿಜಿಪಿಗೆ ಮೇಲ್ದರ್ಜೆಗೆ ಏರಿಸಿ ಕಮಲ್ ಪಂತ್​ಗೆ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನಿಷ್ಕಳಂಕ ಸೇವೆ ಸಲ್ಲಿಸಿದ್ದ ಕಮಲ್ ಪಂತ್​ಗೆ ನೇಮಕಾತಿ ವಿಭಾಗವನ್ನು ಸರಿದಾರಿಗೆ ತರುವ ಸವಾಲು ನೀಡಲಾಗಿದೆ. ನೇಮಕಾತಿ ವಿಭಾಗದ ದಕ್ಷ ಅಧಿಕಾರಿ, ಸಿಬ್ಬಂದಿಯನ್ನು ಬಳಸಿಕೊಂಡು ರದ್ದಾಗಿರುವ 545 ಎಸ್​ಐ ನೇಮಕಾತಿಯ ಮರು ಪರೀಕ್ಷೆ ಮತ್ತು 409 ಎಸ್​ಐ ಹುದ್ದೆಗಳ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸಿ ಮತ್ತೆ ಪೊಲೀಸ್ ನೌಕರಿ ಆಕಾಂಕ್ಷಿಗಳಲ್ಲಿ ಭರವಸೆ ಮೂಡಿಸಬೇಕಾಗಿದೆ. ಕಮಲ್ ಪಂತ್​ರಿಂದ ಖಾಲಿಯಾದ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಎಡಿಜಿಪಿ ಸಿ.ಎಚ್. ಪ್ರತಾಪ್ ರೆಡ್ಡಿಯನ್ನು ವರ್ಗಾವಣೆ ಮಾಡಲಾಗಿದೆ. ಪ್ರತಾಪ್ ರೆಡ್ಡಿಯಿಂದ ತೆರವಾದ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹುದ್ದೆಗೆ ಎಡಿಜಿಪಿ ಅಲೋಕ್​ಕುಮಾರ್​ರನ್ನು ನೇಮಿಸಲಾಗಿದೆ.

    ರಾಜ್ಯ ಅಪರಾಧ ಮತ್ತು ತಂತ್ರಜ್ಞಾನ ವಿಭಾಗದ ಎಡಿಜಿಪಿ ಆರ್. ಹಿತೇಂದ್ರಗೆ ಕೆಎಸ್​ಆರ್​ಪಿ ಹುದ್ದೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಇದಕ್ಕೂ ಮೊದಲು ನೇಮಕಾತಿ ವಿಭಾಗದಲ್ಲಿ ಅಕ್ರಮ ಆರೋಪದ ಕೇಳಿ ಬಂದ ಹಿನ್ನೆಲೆಯಲ್ಲಿ ಎಡಿಜಿಪಿ ಅಮೃತ್ ಪೌಲ್​ರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ಎತ್ತಂಗಡಿ ಮಾಡಿ ಹಿತೇಂದ್ರ ಅವರಿಗೆ ನೇಮಕಾತಿ ವಿಭಾಗದ ಹೆಚ್ಚುವರಿ ಹೊಣೆ ನೀಡಲಾಗಿತ್ತು. ಎಂ.ಎನ್. ಅನುಚೇತ್ ಕೇಂದ್ರ ವಿಭಾಗ ಡಿಸಿಪಿಯಿಂದ ಸಿಐಡಿಗೆ ವರ್ಗಾವಣೆಯಾಗಿದ್ದಾರೆ. 2016ರ ಸೆಪ್ಟೆಂಬರ್​ನಲ್ಲಿ ನಡೆದ ಕಾವೇರಿ ಗಲಾಟೆ ವೇಳೆ ಬೆಂಗಳೂರು ನಗರ ಪಶ್ಚಿಮ ವಿಭಾಗ ಡಿಸಿಪಿಯಾಗಿದ್ದ ಅನುಚೇತ್, ಈ ಮೊದಲು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಪತ್ತೆಹಚ್ಚಿದ್ದರು. ಇದಾದ ಮೇಲೆ ಬೆಂಗಳೂರಿನ ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts