ಚೆನ್ನೈ: ಮಾಲ್ಡೀವ್ಸ್ ಪ್ರವಾಸದಲ್ಲಿರುವ ಮಲಯಾಳಿ ಬ್ಯೂಟಿ ಮಾಳವಿಕ ಮೋಹನನ್ ಇತ್ತೀಚೆಗೆ ಬಿಕಿನಿ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ದುರ್ಬಳಕೆಯನ್ನು ಖಂಡಿಸಿರುವ ಮಾಳವಿಕ, ಫೋಟೋವನ್ನು ಕೆಟ್ಟದಾಗಿ ಎಡಿಟ್ ಮಾಡಿ ಹರಿಬಿಡುವವರ ವಿರುದ್ಧ ಹರಿಹಾಯ್ದಿದ್ದಾರೆ.
ತಮ್ಮ ಒಂದು ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಮಾಳವಿಕ, ಈ ಫೋಟೋ ಕೆಲವು ತಿಂಗಳುಗಳ ಹಿಂದೆ ತೆಗೆದ ನನ್ನ ಫೋಟೋ. ಆದರೆ, ಕೆಲವರು ಈ ಫೋಟೋವನ್ನು ಕೆಟ್ಟದಾಗಿ ತಿರುಚಿದ್ದಾರೆ. ಅದನ್ನು ಅನೇಕ ಜನರು ಶೇರ್ ಮಾಡುತ್ತಿದ್ದಾರೆ. ಅಲ್ಲದೆ, ಕೆಲ ಮಾಧ್ಯಮದಲ್ಲೂ ಈ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಇದು ಕಳಪೆ ಪತ್ರಿಕೋದ್ಯಮದ ಲಕ್ಷಣವಾಗಿದೆ. ನಕಲಿ ಫೋಟೋಗಳನ್ನು ನೋಡಿದ್ದಲ್ಲಿ ರಿಪೋರ್ಟ್ ಮಾಡಿ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಈ ರೀತಿ ಫೋಟೋಗಳನ್ನು ತಿರುಚುತ್ತಿರುವುದು ಇದೇ ಮೊದಲೇನಲ್ಲ. ಅನೇಕ ನಟಿಯರು ಇದರ ಸಂತ್ರಸ್ತೆಯರಾಗಿದ್ದಾರೆ. ಆದರೆ, ಕೆಲವೇ ನಟಿಯರು ಈ ಬಗ್ಗೆ ಧ್ವನಿ ಎತ್ತಿದರೆ, ಇನ್ನು ಕೆಲವು ಅದನ್ನು ನಿರ್ಲಕ್ಷಿಸಿ ತಮ್ಮ ಕೆಲಸದತ್ತ ಗಮನ ಹರಿಸುತ್ತಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಮಾಳವಿಕ ದಕ್ಷಿಣ ಭಾರತ ಸಿನಿರಂಗದಲ್ಲಿ ದಿನೇ ದಿನೆ ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ನಟ ವಿಜಯ್ ನಟನೆಯ ಮಾಸ್ಟರ್ ಚಿತ್ರದ ಮೂಲಕ ಮಾಳವಿಕ ಒಳ್ಳೆಯ ಹೆಸರು ಗಳಿಸಿದ್ದಾರೆ. (ಏಜೆನ್ಸೀಸ್)