ಸಿನಿವಾಣಿ

ಹಾಲಿವುಡ್ ನಟಿಯ ಹಾಸಿಗೆಯ ಮೇಲೆ ಟಾಲಿವುಡ್ ನಿರ್ದೇಶಕ

ಹೈದರಾಬಾದ್​: ಟಾಲಿವುಡ್​ ನಿರ್ದೇಶಕ ಪುರಿ ಜಗನ್ನಾಥ್​ ನಿರ್ದೇಶನದ ಚಿತ್ರಗಳು, ಕೆಲಸಗಳು ಮತ್ತು ಸಾಧನೆಗಳು ಗೊತ್ತಿರುತ್ತವೆ. ಆದರೆ, ಅವರ ಜೀವನದಲ್ಲಾದ ಚಿತ್ರ-ವಿಚಿತ್ರ ಅನುಭವಗಳು ಮಾತ್ರ ಗೊತ್ತಿರುವುದಿಲ್ಲ. ಅಂಥದ್ದೊಂದು ಅನುಭವವನ್ನು ಸ್ವತಃ ಪುರಿ ಜಗನ್ನಾಥ್​ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಪುರಿ ಜಗನ್ನಾಥ್​ಗೆ ಹಾಲಿವುಡ್​ ನಟಿ ಏಂಜಲೀನಾ ಜೋಲಿ ಕಂಡರೆ ಭಯಂಕರ ಅಭಿಮಾನವಂತೆ. ಏಂಜಲೀನಾ ಅವರ ಹುಚ್ಚು ಅಭಿಮಾನಿಯಾಗಿರುವ ಪುರಿ, ಆಕೆ ಜಗತ್ತಿನ ಅತ್ಯಂತ ಸುಂದರಿ ಎಂದು ಹೇಳುತ್ತಾರೆ. ಆಕೆಯನ್ನು ಒಮ್ಮೆಯಾದರೂ ನೋಡಬೇಕು ಎಂದು ಆಸೆಪಟ್ಟಿದ್ದ ಪುರಿ, ಅದು ಸಾಧ್ಯವಾಗದಿದ್ದರೂ, ಏಂಜಲೀನಾ ಮಲಗಿದ ಹಾಸಿಗೆಯ ಮೇಲೆ ಸ್ವಲ್ಪ ಹೊತ್ತು ಕೂತು, ಅವರನ್ನೇ ಭೇಟಿ ಮಾಡಿದಷ್ಟು ಧನ್ಯತೆ ಅನುಭವಿಸಿದ್ದಾರಂತೆ.

ಈ ಬಗ್ಗೆ ಮಾತನಾಡಿರುವ ಅವರು. ಅದೊಮ್ಮೆ ವೆನೀಸ್​ಗೆ ಹೋಗಿದ್ದೆ. ಮಾರ್ಕ್ಸ್​ ಸ್ಕ್ವೇರ್​ನಲ್ಲಿರುವ ಡೇನಿಯಲಿ ಎಂಬ ಹೋಟೆಲ್​ನಲ್ಲಿ ಏಂಜಲೀನಾ ತಂಗಿದ್ದರು ಎಂಬ ವಿಷಯ ಗೊತ್ತಾಯಿತು. ನಾನು ಅಲ್ಲಿಗೆ ಹೋಗುವಷ್ಟರಲ್ಲಿ ಅವರು ರೂಮು ಖಾಲಿ ಮಾಡಿ ಹೊರಟುಹೋಗಿದ್ದರು. ಅಲ್ಲಿನ ಮ್ಯಾನೇಜರ್​ ಅವರನ್ನು ಭೇಟಿ ಮಾಡಿ, ಏಂಜಲೀನಾ ಉಳಿದುಕೊಂಡಿದ್ದ ರೂಮಿಗೆ ಹೋದೆ. ಮ್ಯಾನೇಜರ್​ ಜತೆಗೆ ಮಾತನಾಡುತ್ತಾ, ಏಂಜಲೀನಾ ಮಲಗಿದ್ದ ಹಾಸಿಗೆಯ ಮೇಲೆ ಕುಳಿತೆ. ಆಕೆಯನ್ನು ಭೇಟಿ ಮಾಡುವುದಕ್ಕಂತೂ ಸಾಧ್ಯವಾಗಲಿಲ್ಲ. ಆಕೆ ಮಲಗಿದ್ದ ಹಾಸಿಗೆಯ ಮೇಲೆ ಕುಳಿತಾಗ ಏನೋ ಸಾರ್ಥಕ ಭಾವ ಬಂತು ಎಂದು ಪುರಿ ಹೇಳಿಕೊಂಡಿದ್ದಾರೆ.