ಸಿನಿವಾಣಿ

800 ಕಿ.ಮೀ. ದೂರ ನಡೆದುಕೊಂಡೇ ಬಂದು ಅಪ್ಪು ಸಮಾಧಿಗೆ ಭಾರವಾದ ಮನಸ್ಸಿನಲ್ಲೇ ನಮಿಸಿದ ಅಭಿಮಾನಿ!

ಬೆಂಗಳೂರು: ನಟ ಪುನೀತ್​​ ರಾಜ್​ಕುಮಾರ್​ ಅವರು​ ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ. ಆದರೆ ಅವರಿಗೆ ಮಿಡಿಯುತ್ತಿರುವ ಹೃದಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪುನೀತ್​ರ​​ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆಯೂ ಇದಕ್ಕೆ ಹೊರತಾಗಿಲ್ಲ. ಅಪ್ಪು ಮೇಲಿನ ಅಭಿಮಾನ ಕರಗುತ್ತಿಲ್ಲ. ಓಟ, ಬೈಕ್​ ರಾಲಿ, ಸೈಕಲ್​ ಸವಾರಿ... ಹೀಗೆ ವಿಭಿನ್ನ ರೀತಿಯಲ್ಲಿ ಅಪ್ಪು ಪುಣ್ಯಸ್ಥಳಕ್ಕೆ ಆಗಮಿಸುತ್ತಾರೆ. ಇದೀಗ ಬೀದರ್​​ನಿಂದ 800ಕ್ಕೂ ಹೆಚ್ಚು ಕಿ.ಮೀ. ದೂರ ನಡೆದುಕೊಂಡೇ ಅಭಿಮಾನಿಯೊಬ್ಬ ಕಂಠೀರವ ಸ್ಟುಡಿಯೋ ಆವರಣಕ್ಕೆ ಆಗಮಿಸಿ ಅಪ್ಪು ಸಮಾಧಿಗೆ ಭಾರವಾದ ಮನಸ್ಸಿನಲ್ಲೇ ನಮಿಸಿದ್ದಾನೆ.

ಬೀದರ್​ ಜಿಲ್ಲೆಯ ಸಂತೋಷ್ ನಡೆದುಕೊಂಡು ಬಂದವ. ಈ ಹಿಂದೆ ಹಿಮಾಚಲ ಪ್ರದೇಶದಿಂದ ಅಭಿಮಾನಿಯೊಬ್ಬರು ಸೈಕಲ್​ನಲ್ಲಿ ಬಂದಿದ್ದರು. ಇದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಬೀದರ್​ನಿಂದ ಪಾದಯಾತ್ರೆ ಮೂಲಕ ಬಂದಿದ್ದೇನೆ ಎಂದು ಸಂತೋಷ್​​ ಹೇಳಿದರು. ಅಲ್ಲದೆ ತನ್ನ ಸ್ನೇಹಿತರ ಬಳಿಯಿಂದ ಶಕ್ತಿಧಾಮಕ್ಕೆ ಕೊಡಲೆಂದು 21 ಸಾವಿರ ರೂ. ಸಂಗ್ರಹಿಸಿ ತಂದಿರುವೆ. ಹಣವನ್ನು ನಾಳೆ (ಶನಿವಾರ) ಶಕ್ತಿಧಾಮಕ್ಕೆ ಒಪ್ಪಿಸುವೆ ಎನ್ನುವಾಗ ಅವರ ಮನದಲ್ಲಿ ಸಾರ್ಥಕ ಭಾವ ತುಂಬಿತ್ತು.

ಪುನೀತ್ ರಾಜ್​ಕುಮಾರ್​ರ ಮೊದಲ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಶುಕ್ರವಾರ ರಾತ್ರಿಯಿಡೀ ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ. ಇಂದು ರಾತ್ರಿ 12 ರಿಂದ ಪುನೀತ್ ಗೀತ ನಮನ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸಮಾಧಿ ಸುತ್ತಮುತ್ತ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ನೇತೃತ್ವದಲ್ಲಿ 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.