ಸಿನಿವಾಣಿ

ಕೊಪ್ಪಳದಲ್ಲಿ ಅಪ್ಪುಗೆ ಇದೆಂಥ ಅವಮಾನ?

ಕೊಪ್ಪಳ: ಅಪ್ಪು ನಿಧನರಾದ ಬಳಿಕ ಅವರ ಮೇಲೆ ಅಭಿಮಾನಿಗಳಿಗೆ ಇದ್ದ ಗೌರವ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅಪ್ಪು ಅವರು ಮಾಡಿದ ಸಾಮಾಜಿಕ ಕೆಲಸಗಳಿಂದ ಅವರಿಗೆ ಹಲವರು ದೇವರ ಸ್ಥಾನವನ್ನೇ ನೀಡಿದ್ದಾರೆ. ಕೇವಲ ಬೀದಿಗಳಲ್ಲಿ, ಥಿಯೇಟರ್​ಗಳಲ್ಲಿ, ದೇವಸ್ಥಾನಗಳಲ್ಲಿ, ಅಲ್ಲದೇ ಮನೆಯಲ್ಲಿಯೂ ದೇವರ ಫೋಟೋ ಜೊತೆಗೆ ಪುನೀತ್ ಅವರ ಫೋಟೋ ಇಟ್ಟು ಪೂಜೆ ಮಾಡಿತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹೌದು, ಊರುಗಳ ಜಾತ್ರೆಗಳಲ್ಲಿ, ದೇವರ ಉತ್ಸವಗಳಲ್ಲೂ ದೇವರಿಗಿಂತ ಹೆಚ್ಚು ಅಪ್ಪು ಅವರ ಫೋಟೋಗಳು ರಾರಾಜಿಸುತ್ತವೆ.
ಆದರೆ, ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಅಪ್ಪು ಅವರಿಗೆ ಅವಮಾನ ಮಾಡಿದ್ದಾರೆ. ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ಕೊಪ್ಪಳ ತಾಲೂಕಿನ ಹುವಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂದಹಾಗೆ, ಅಪ್ಪು ಅವರ ಜನ್ಮದಿನದ ಪ್ರಯುಕ್ತ ಈ ಗ್ರಾಮದಲ್ಲಿ ಅಪ್ಪು ಅವರ ಫೋಟೋ ಇರುವ ಕನ್ನಡ ಭಾವುಟವನ್ನು ಹಲವು ಕಡೆ ಹಾಕಲಾಗಿತ್ತು. ಕೆಲವು ಕಿಡಿಗೇಡಿಗಳು ಅಪ್ಪು ಫೋಟೋ ಇರುವ ಒಂದು ಕನ್ನಡದ ಭಾವುಟವನ್ನು ಮಾ. 18 ರಂದು ತಡರಾತ್ರಿ ಕಿತ್ತು ಹಾಕಿ ಅದನ್ನು ಕೆರೆಯಲ್ಲಿರುವ ಕಸದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ. ಕನ್ನಡ ಭಾವುಟಕ್ಕೆ ಮತ್ತು ನಟ ಪುನೀತ್​ ರಾಜ್​ಕುಮಾರ್​ ಅವರಿಗೆ ಅವಮಾನ ಮಾಡಲಾಗಿರುವ ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ.
ಇನ್ನು, ಭಾವುಟ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿ.ಸಿ.ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಜತೆಗೆ, ಈ ಘಟನೆಯ ಕುರಿತು ಗ್ರಾಪಂ ಸದಸ್ಯ ಪತ್ರಯ್ಯ ಶಾಂತವೀರಯ್ಯ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಈ ಘಟನೆಯಿಂದ ಕೋಪಗೊಂಡ ಪುನೀತ್ ಅಭಿಮಾನಿಗಳು ಗ್ರಾಮದಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಸದ್ಯ, ಈ ಘಟನೆ ಇಡೀ ರಾಜ್ಯದಲ್ಲಿ ಅಪ್ಪು ಅಭಿಮಾನಿಗಳ ಮತ್ತು ಕರುನಾಡ ಜನತೆಯ ನಿದ್ದೆಗೆಡಿಸಿದೆ ಎನ್ನಬಹುದು.