Pulsar Suni : ಕೊಚ್ಚಿಯಲ್ಲಿ 2017ರಲ್ಲಿ ಯುವ ನಟಿಯ ಮೇಲೆ ನಡೆದ ಹಲ್ಲೆ ಪ್ರಕರಣದ ಎ1 ಆರೋಪಿ ಪಲ್ಸರ್ ಸುನಿ, ನಟ ದಿಲೀಪ್ ವಿರುದ್ಧ ಅನೇಕ ಶಾಕಿಂಗ್ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ದಿಲೀಪ್ ತನಗೆ 1.5 ಕೋಟಿ ರೂ.ಗಳ ಆಫರ್ ನೀಡಿದ್ದರು. ಅದರಲ್ಲಿ 80 ಲಕ್ಷ ರೂಪಾಯಿ ಹಣ ಬಾಕಿ ನೀಡಬೇಕಿದೆ ಎಂದು ಪಲ್ಸರ್ ಸುನಿ ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಅಲ್ಲದೆ, ಈ ಪ್ರಕರಣದ ಎಂಟನೇ ಆರೋಪಿ ದಿಲೀಪ್, ಮ್ಯಾನೇಜರ್ ಅಪ್ಪುನ್ನಿ ವಿರುದ್ಧವೂ ಸುನಿ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಚಿನ ಹಿಂದಿರುವ ರುವಾರಿ ಅಪ್ಪುನ್ನಿಯೇ ಎಂದು ಹೇಳಿದ್ದಾನೆ.
ಉಳಿದ ಹಣವನ್ನು ನೀಡುವಂತೆ ಜೈಲಿನಿಂದ ಅಪ್ಪುನ್ನಿಗೆ ಕರೆ ಮಾಡಿದಾಗ, ಆತ ಹಣ ಕೊಡಲು ನಿರಾಕರಿಸಿದ. ಅಲ್ಲದೆ, ಏನು ಬೇಕಾದರೂ ಮಾಡು ಆದರೆ, ಹಣ ಕೊಡುವುದಿಲ್ಲ ಎಂದ. ತಾನು ಮೋಸ ಮಾಡುವುದಿಲ್ಲ ಎಂದು ನಂಬಿದ್ದ ದಿಲೀಪ್ ಅವರೇ ಈ ರೀತಿ ಮಾಡಿದಾಗ ಹಣ ಸಿಗುವುದಿಲ್ಲ ಎಂದು ಖಚಿತವಾಯಿತು. ಆತ ಮೋಸ ಮಾಡಿದ ಬಳಿಕ ಇಡೀ ಪ್ರಕರಣದ ಮಾಹಿತಿಯನ್ನು ಪೊಲೀಸರಿಗೆ ಬಹಿರಂಗಪಡಿಸಲು ಆರಂಭಿಸಿದೆ ಎಂದು ಸುನಿ ತಿಳಿಸಿದ್ದಾರೆ.
ಮಾತು ಮುಂದುವರಿಸಿದ ಪಲ್ಸರ್ ಸುನಿ, ದಿಲೀಪ್ಗೆ ಕರೆ ಮಾಡಿದಾಗಲೆಲ್ಲ ಅಪ್ಪುನ್ನಿ ಫೋನ್‌ಗೆ ಉತ್ತರಿಸುತ್ತಿದ್ದ. ಅಪ್ಪುನ್ನಿ, ದಿಲೀಪ್ ಹೇಳಿದಂತೆಯೇ ಮಾತನಾಡುತ್ತಿದ್ದ. ಮಂಜು ಮತ್ತು ಕಾವ್ಯಾಗೆ ತಿಳಿದಿಲ್ಲದ ವಿಷಯಗಳು ಅಪ್ಪುನ್ನಿಗೆ ತಿಳಿದಿವೆ. ಅಪ್ಪುನ್ನಿ ದಿಲೀಪ್‌ನ ಆತ್ಮಸಾಕ್ಷಿ. ನಾನು ಬಂಧನವಾದ ಎರಡು ತಿಂಗಳವರೆಗೂ ಏನೂ ಮಾಡದೇ ಆತ ಸುಮ್ಮನಾದ. ಆತ ನನ್ನ ಕೈಬಿಡದೇ ಹೋಗಿದ್ದರೆ ನಾನು ಕೂಡ ಆತನಿಗೆ ನಿಯತ್ತಾಗಿ ಇರುತ್ತಿದ್ದೆ ಎಂದು ಪಲ್ಸರ್ ಸುನಿ ಹೇಳಿದ್ದಾನೆ.
ನಟಿಯ ಮೇಲೆ ಅತ್ಯಾಚಾರ ಮಾಡಿ, ಅದನ್ನು ರೆಕಾರ್ಡ್ ಮಾಡಿ ಬ್ಲಾಕ್ಮೇಲ್ ಮಾಡುವುದೇ ಉದ್ದೇಶವಾಗಿತ್ತು. ಈ ಬಗ್ಗೆ ನಟಿಗೂ ಮಾಹಿತಿ ನೀಡಲಾಯಿತು. ತನ್ನ ಮೇಲೆ ಯಾವುದೇ ದೌರ್ಜನ್ಯ ಎಸಗದಂತೆ ತಡೆಯಲು ಆಕೆಯು ಕೂಡ ಕೊಡುವುದಾಗಿ ಆಫರ್ ಮಾಡಿದ್ದಳು. ಆದರೆ, ನಾನು ಆ ಆಫರ್ ಒಪ್ಪಲಿಲ್ಲ. ತನ್ನ ಕುಟುಂಬ ಮುರಿದು ಬಿದ್ದಿದ್ದು ದಿಲೀಪ್ ಹತಾಶೆಗೆ ಕಾರಣವಾಯಿತು. ವಿಡಿಯೋವನ್ನು ತೋರಿಸಿ ನಟಿಯನ್ನು ಬ್ಲಾಕ್ಮೇಲ್ ಮಾಡುವುದು ದಿಲೀಪ್ ಪ್ಲಾನ್ ಆಗಿತ್ತು ಎಂದು ಸುನಿ ಹೇಳಿದ್ದಾನೆ.
ಲೈಂಗಿಕ ದೌರ್ಜನ್ಯದ ದೃಶ್ಯ ಪೊಲೀಸರಿಗೆ ಸಿಕ್ಕಿದಾಗ ಇಡೀ ಪ್ರಕರಣ ಒಂದು ತಿರುವು ಪಡೆದುಕೊಂಡಿತು. ತನ್ನ ವಕೀಲರಿಗೆ ಮೆಮೊರಿ ಕಾರ್ಡ್ ನೀಡಿದ್ದಾಗಿ ಸುನಿ ಹೇಳಿದ. ಇದಾದ ಬಳಿಕ ಅದನ್ನು ಕೋರ್ಟ್ಗೆ ಹಾಜರುಪಡಿಸಲಾಯಿತು. ಆದರೆ, ಹಲ್ಲೆಯನ್ನು ರೆಕಾರ್ಡ್ ಮಾಡಲು ಬಳಸಿದ ಮೊಬೈಲ್ ಫೋನ್ ಎಲ್ಲಿ ಬಚ್ಚಿಡಲಾಗಿದೆ ಎಂಬುದನ್ನು ಸುನಿ ಬಹಿರಂಗಪಡಿಸಿಲ್ಲ. ಇನ್ನು ದಿಲೀಪ್ ಅವರ ಅರಿವಿನಿಂದಲೇ ಇತರ ನಟಿಯರ ಮೇಲೂ ದಾಳಿ ನಡೆಸಲಾಗಿದೆ. ಆದರೆ, ಈ ಲೈಂಗಿಕ ದೌರ್ಜನ್ಯ ಈಗಾಗಲೇ ಇತ್ಯರ್ಥವಾಗಿವೆ ಎಂಬ ಸ್ಫೋಟಕ ಸಂಗತಿಯನ್ನು ಸಹ ಹೇಳಿದ. (ಏಜೆನ್ಸೀಸ್)