ಸಿನಿವಾಣಿ

ಖಾಕಿ ತೊಟ್ಟ ಪೃಥ್ವಿ ಅಂಬರ್​; 'ಮತ್ಸ್ಯ ಗಂಧ' ಚಿತ್ರದ ಫಸ್ಟ್​ ಲುಕ್​ ಬಿಡುಗಡೆ

chetannadiger

ಬೆಂಗಳೂರು: ಬೇರೆಲ್ಲ ಹೀರೋಗಳು ಮಾಸ್​ ಪಾತ್ರಗಳತ್ತ ಹೊರಳುತ್ತಿದ್ದರೂ, ಪೃಥ್ವಿ ಅಂಬರ್​ ಮಾತ್ರ ಅಂತಹ ಸಾಹಸಕ್ಕೆ ಕೈ ಹಾಕಿರಲಿಲ್ಲ. 'ದಿಯಾ' ಚಿತ್ರದಲ್ಲಿ ತಮ್ಮ ಸಾಫ್ಟ್​ ಆದಂತಹ ಪಾತ್ರದಲ್ಲಿ ಗಮನ ಸೆಳೆದ ಪೃಥ್ವಿ, ಆ ನಂತರ 'ಶುಗರ್​ಲೆಸ್​','ಲೈಫ್​ ಈಸ್​ ಬ್ಯೂಟಿಫುಲ್​', 'ಫಾರ್​ ರಿಜಿಸ್ಟ್ರೇಶನ್​' ಮುಂತಾದ ಚಿತ್ರಗಳಲ್ಲಿ ಅದೇ ತರಹದ ಪಾತ್ರವನ್ನು ಮುಂದುವರೆಸಿದ್ದರು.

ಹೀಗೆ ಕ್ಲಾಸ್​ ಆಗಿದ್ದ ಪೃಥ್ವಿ, ಇದೀಗ ಮಾಸ್​ ಆಗಿದ್ದಾರೆ. 'ಮತ್ಸ್ಯ ಗಂಧ‌' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಭಾನುವಾರ ಚಿತ್ರದ ಫಸ್ಟ್​​ಲುಕ್​ ಪೋಸ್ಟರ್​ ಬಿಡುಗಡೆಯಾಗಿದೆ.

ಕಲಿಕಾ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ತಯಾರಾಗುತ್ತಿರುವ 'ಮತ್ಸ್ಯ ಗಂಧ' ಚಿತ್ರವನ್ನು ದೇವರಾಜ್ ಪೂಜಾರಿ ನಿರ್ದೇಶಿಸುತ್ತಿದ್ದಾರೆ. ಇದು ಅವರ ನಿರ್ದೇಶನದ ಎರಡನೆಯ ಚಿತ್ರ. ದೇವರಾಜ್ ಈ ಹಿಂದೆ 'ಕಿನಾರೆ' ಎನ್ನುವ ಸಿನಿಮಾ ಮಾಡಿದ್ದರು. ಈ ಚಿತ್ರಕ್ಕೆ ರೋಹಿತ್​ ಅಂಪರ್​ ಅವರ ಛಾಯಾಗ್ರಹಣ ಮತ್ತು ಪ್ರಶಾಂತ್ ಸಿದ್ದಿ ಅವರ ಸಂಗೀತವಿದೆ.

'ಸ್ಟೋರಿ ಆಫ್ ಉತ್ತರ ಕನ್ನಡ' ಎಂಬ ಟ್ಯಾಗ್​ಲೈನ್​ ಈ ಚಿತ್ರಕ್ಕಿದ್ದು, ಅದರಂತೆ ಉತ್ತರ ಕನ್ನಡದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ.

ಪೃಥ್ವಿ ಅಂಬರ್​ ಜತೆಗೆ ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ವಿರಾನಿಕ ಶೆಟ್ಟಿ, ಕಿರಣ್​ ನಾಯ್ಕ್​, ರಘು ಪಾಂಡೇಶ್ವರ್​ ಮುಂತಾದವರು ಈ ಚಿತ್ರವಲ್ಲಿ ನಟಿಸುತ್ತಿದ್ದಾರೆ. ಸದ್ಯ ಪೋಸ್ಟರ್​ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.