Ranjith Kumar : ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ರಂಜಿತ್ ಕುಮಾರ್ ಮತ್ತು ಅವರ ಸಹೋದರಿ ರಶ್ಮಿ ನಡುವೆ ಕಿತ್ತಾಟ ನಡೆದಿದ್ದು, ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಾವು ವಾಸ ಮಾಡುತ್ತಿರುವ ಫ್ಲ್ಯಾಟ್ನಲ್ಲಿ ಇಬ್ಬರಿಗೂ ಪಾಲು ಬೇಕು ಎಂದು ಹೇಳಿ ರಂಜಿತ್ ಮತ್ತು ಅವರ ಸಹೋದರಿ ಇಬ್ಬರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಮನೆಯಲ್ಲಿ ನಡೆದ ಜಗಳಲ್ಲಿ ರಶ್ಮಿ ಮತ್ತು ರಂಜಿತ್ ಅವರ ಪತ್ನಿ ಮಾನಸ ಗೌಡ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ. ಸದ್ಯ ದೂರು ಪಡೆದು ಎನ್ಸಿಆರ್ ದಾಖಲು ಮಾಡಿರುವ ಪೊಲೀಸರು, ಫ್ಲ್ಯಾಟ್ ವಿಚಾರ ಸಿವಿಲ್ ವ್ಯಾಜ್ಯ ಆಗಿರುವುದರಿಂದ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ಕಳುಹಿಸಿದ್ದಾರೆ. ಅಲ್ಲದೆ, ಮತ್ತೊಮ್ಮೆ ಗಲಾಟೆ ಮಾಡಿಕೊಂಡರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆಂದು ವರದಿಯಾಗಿದೆ.
2018 ರಲ್ಲಿ ಅಮೃತಹಳ್ಳಿಯ ಸಾಯಿ ಪ್ಯಾರಡೈಸ್ ಅಪಾರ್ಟ್ಮೆಂಟ್ ಮೊದಲ ಮಹಡಿಯಲ್ಲಿ ರಂಜಿತ್ ಕುಟುಂಬ ಮೊದಲ ಫ್ಲ್ಯಾಟ್ ಖರೀದಿಸಿತ್ತು. ಲೋನ್ ಮಾಡಿಸಿ ಫ್ಲ್ಯಾಟ್ ಖರೀದಿಸಲಾಗಿತ್ತು. ಈ ವೇಳೆ ರಂಜಿತ್ ಸಹೋದರಿ ರಶ್ಮಿ ಹೆಸರಲ್ಲಿ ಫ್ಲ್ಯಾಟ್ ಖರೀದಿ ಮಾಡಲಾಗಿತ್ತು. ರಂಜಿತ್ ಹೆಸರಿಗೆ ಲೋನ್ ಆಗದಿದ್ದಕ್ಕೆ ಸಹೋದರಿ ರಶ್ಮಿ ಹೆಸರಲ್ಲಿ ಲೋನ್ ಮಾಡಿಸಿ ಫ್ಲ್ಯಾಟ್ ಖರೀದಿ ಮಾಡಲಾಗಿದೆ. ಆದರೆ, ಲೋನ್ ತೀರಿಸಿದ್ದು ಮನೆ ಖರೀದಿಸಲು ಹಣ ಕೊಟ್ಟಿದ್ದು ನಾನು ಎಂದು ರಂಜಿತ್ ವಾದಿಸುತ್ತಿದ್ದಾರೆ.
ರಂಜಿತ್ ಮದುವೆ ಆಗೋವರೆಗೂ ಅಂದರೆ, 2025ರ ಮೇ ತಿಂಗಳವರೆಗೂ ಮೊದಲ ಮಹಡಿಯ 3 BHK ಫ್ಲ್ಯಾಟ್ನಲ್ಲಿ ಎಲ್ಲರೂ ವಾಸ ಮಾಡುತ್ತಿದ್ದರು. ರಂಜಿತ್ ಮದುವೆ ನಂತರ ಮೂರನೇ ಮಹಡಿಯಲ್ಲಿರುವ 2 BHK ಬಾಡಿಗೆ ಫ್ಲ್ಯಾಟ್ಗೆ ರಶ್ಮಿ ಮತ್ತು ಅವರು ಪತಿ ಜಗದೀಶ್ ಸ್ಥಳಾಂತರ ಮಾಡಿದರು. ಇದೀಗ ರಂಜಿತ್ ವಾಸವಿರುವ ಮೊದಲ ಫ್ಲ್ಯಾಟ್ನಲ್ಲಿ ನನಗೂ ಪಾಲು ಬೇಕೆಂದು ಅಕ್ಕ-ತಮ್ಮ ಇಬ್ಬರು ಜಗಳ ತೆಗೆದಿದ್ದಾರೆ. ಇದೇ ವಿಚಾರವಾಗಿ ಮನೆಯಲ್ಲಿ ಗಲಾಟೆ ಕೂಡ ನಡೆದಿದೆ.
ಸದ್ಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ರಂಜಿತ್ ಹಾಗೂ ಸಹೋದರಿ ರಶ್ಮಿರಿಂದ ದೂರು ಪ್ರತಿದೂರು ದಾಖಲಾಗಿದೆ. ಮೊದಲ ಮಹಡಿಯ ಫ್ಲಾಟ್ ರಂಜಿತ್ ತಾಯಿ ಹಾಗೂ ಸಹೋದರಿ ಒಡೆತನದಲ್ಲಿದೆ. ಸದ್ಯ ನನ್ನ ತಾಯಿ ಹಾಗೂ ನನ್ನ ಒಡೆತನದ ಫ್ಲ್ಯಾಟ್ನಲ್ಲಿ ನನ್ನ ಪತ್ನಿ ಮತ್ತು ತಮ್ಮನಿದ್ದಾನೆ. ಅಲ್ಲದೆ, ಆ ಮನೆ ನನಗೆ ಸೇರಿದ್ದು ಎನ್ನುತ್ತಿದ್ದಾನೆ. ಅಲ್ಲದೆ, ಮನೆಯನ್ನು ಬಿಡುವಂತೆ ಕುಟುಂಬಸ್ಥರಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ರಶ್ಮಿ ಪತಿ ಜಗದೀಶ್ ದೂರು ನೀಡಿದ್ದಾರೆ.