ಪ್ರಿಯಾಂಕಾ ಚೋಪ್ರಾ, ಹಾಲಿವುಡ್ನಲ್ಲಿ ನಟಿಸಲು ಅವಕಾಶ ಸಿಕ್ಕಿತು ಅಂತ ಅಮೆರಿಕಾಗೆ ಹೋದವರು ಮತ್ತೆ ಬಾಲಿವುಡ್ನತ್ತ ತಿರುಗಿ ನೋಡಿಲ್ಲ. ಅಲ್ಲಿಯೇ ವೆಬ್ಸರಣಿ, ಸಿನಿಮಾ ಅಂತ ಬಿಜಿಯಾಗಿ ಹಾಲಿವುಡ್ ಸ್ಟಾರ್ಅನ್ನೇ ಮದುವೆಯಾಗಿ ಅಲ್ಲಿಯೇ ಸೆಟಲ್ ಆಗಿಬಿಟ್ಟಿದ್ದಾರೆ. 2016ರ ಬಳಿಕ ಕಳೆದ ವರ್ಷ ರಿಲೀಸ್ ಆದ ‘ದಿ ವೈಟ್ ಟೈಗರ್’ ಹೊರತುಪಡಿಸಿ ಪ್ರಿಯಾಂಕಾ ಬಾಲಿವುಡ್ನಲ್ಲಿ ನಟಿಸಿಲ್ಲ. ಆದರೆ,ಇದೇ ಸಮಯದಲ್ಲಿ ಏಳೆಂಟು ಹಾಲಿವುಡ್ ಪ್ರಾಜೆಕ್ಟ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಮತ್ತೊಂದು ಹಾಲಿವುಡ್ ಚಿತ್ರಕ್ಕೆ ಪ್ರಿಯಾಂಕಾ ಸೈನ್ ಮಾಡಿದ್ದಾರೆ.
ವಿಶೇಷ ಅಂದರೆ ಆ ಚಿತ್ರದಲ್ಲಿ ಅವರು ಪಂಜಾಬಿ ಮಹಿಳೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಹೌದು, ಭಾರತೀಯ ಮೂಲದ ಹಾಲಿವುಡ್ ನಟಿ, ನಿರ್ದೇಶಕಿ, ನಿರ್ವಪಕಿಯೂ ಆಗಿರುವ ಮಿಂಡಿ ಕಾಳಿಂಗ್ ಭಾರತದ ಮೇಲಿನ ಪ್ರೀತಿಗಾಗಿ ಒಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಭಾರತೀಯ ಜೋಡಿಯ ಅದ್ಧೂರಿ ಮದುವೆಯ ಸ್ಟೋರಿ ಅದು. ಅದರಲ್ಲಿ ಅಮೆರಿಕಾದಲ್ಲಿ ಸೆಟಲ್ ಆದ ಭಾರತೀಯ ಮಹಿಳೆಯ ಪಾತ್ರದಲ್ಲಿ ಮಿಂಡಿ ನಟಿಸಲಿದ್ದು, ಪಂಜಾಬಿ ಸಂಬಂಧಿಯಾಗಿ ಪ್ರಿಯಾಂಕಾ ಕಾಣಿಸಿಕೊಳ್ಳಿದ್ದಾರಂತೆ. ಇನ್ನು ಕೆಲವೇ ದಿನಗಳಲ್ಲಿ ಆ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
ಇತ್ತೀಚೆಗಷ್ಟೇ, ‘ಸಿಟಡೆಲ್’ ವೆಬ್ಸರಣಿಯ ಚಿತ್ರೀಕರಣ ಮುಗಿಸಿದ ಪ್ರಿಯಾಂಕಾ, ಮಾ ಆನಂದ ಶೀಲಾ ಬಯೋಪಿಕ್ ಮತ್ತು ರೊಮ್ಯಾಂಟಿಕ್ ಕಾಮಿಡಿ ‘ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ, ‘ಜೀಲೇ ಝುರಾ’ ಎಂಬ ಫರ್ಹಾನ್ ಅಖ್ತರ್ ನಿರ್ದೇಶಿಸಲಿರುವ ಹೊಸ ಚಿತ್ರವನ್ನೂ ಅವರು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಕೈಫ್, ಆಲಿಯಾ ಭಟ್ ಜತೆ ಪ್ರಿಯಾಂಕಾ ತೆರೆ ಹಂಚಿಕೊಳ್ಳಲಿದ್ದಾರೆ. - ಏಜೆನ್ಸೀಸ್