ಸಿನಿವಾಣಿ

ಕನ್ಯತ್ವ ಒಂದೇ ರಾತ್ರಿಗೆ ಕೊನೆಗೊಳ್ಳುತ್ತೆ ಆದ್ರೆ ನಡತೆ ಶಾಶ್ವತವಾಗಿ ಉಳಿಯುತ್ತೆ: ಕೊನೆಗೂ ಸ್ಪಷ್ಟನೆ ನೀಡಿದ ಪಿಗ್ಗಿ! Priyanka Chopra

Priyanka Chopra : ಕಳೆದ ಕೆಲವು ದಿನಗಳಿಂದ ತಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಸುದ್ದಿಗೆ ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣ, ವೈರಲ್ ಆಗಲು ಸುಲಭವಾದ ಮಾರ್ಗವಾಗಿದೆ. ಆದರೆ, ಅದರಲ್ಲಿ ಬರುವ ಎಲ್ಲಾ ಸುದ್ದಿಗಳು ಮತ್ತು ಪೋಸ್ಟ್‌ಗಳನ್ನು ನಂಬಬೇಡಿ ಎಂದು ಪಿಗ್ಗಿ ತನ್ನ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ಕನ್ಯೆಯಾಗಿರುವ ವಧುವನ್ನು ಹುಡುಕಬೇಡಿ. ಬದಲಾಗಿ, ಉತ್ತಮ ನಡತೆಯ ಮಹಿಳೆಯನ್ನು ಪಡೆಯಿರಿ. ಕನ್ಯತ್ವ ಒಂದೇ ರಾತ್ರಿಯಲ್ಲಿ ಕೊನೆಗೊಳ್ಳುತ್ತದೆ. ಆದರೆ, ನಡತೆ ಶಾಶ್ವತವಾಗಿ ಉಳಿಯುತ್ತದೆ ಅಂತ ಪ್ರಿಯಾಂಕಾ ಚೋಪ್ರಾ ಹೇಳಿಕೆ ನೀಡಿದ್ದಾರೆ ಎಂದು ಬ್ರೀಫ್​ ಇಂಡಿಯಾ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಹಂಚಿಕೊಳ್ಳಲಾಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಪ್ರಿಯಾಂಕಾ ಅವರ ಗಮನಕ್ಕೆ ಬಂದಿದ್ದು, ಸುದ್ದಿಯ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಇದು ನಕಲಿ ಸುದ್ದಿ ಎಂದು ನಟಿ ಪ್ರಿಯಾಂಕಾ ಚೋಪ್ರಾ ದೃಢಪಡಿಸಿದ್ದಾರೆ. ಇದು ನನ್ನ ಧ್ವನಿ ಅಥವಾ ಮಾತುಗಳಲ್ಲ ಎಂದು ಪಿಗ್ಗಿ ಸ್ಪಷ್ಟಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಬಂದ ಮಾತ್ರಕ್ಕೆ ಅದು ನಿಜ ಎಂದು ಅರ್ಥವಲ್ಲ. ಸಾಮಾಜಿಕ ಜಾಲತಾಣ ಯುಗದಲ್ಲಿ, ನಕಲಿ ಸುದ್ದಿಗಳು ಬಹಳ ಬೇಗನೆ ವೈರಲ್ ಆಗಬಹುದು. ಅಂತಹ ಸುದ್ದಿಗಳನ್ನು ಪೋಸ್ಟ್ ಮಾಡುವ ಮೊದಲು, ಸತ್ಯಗಳನ್ನು ಪರಿಶೀಲಿಸಬೇಕು. ನಕಲಿ ವಿಷಯವನ್ನು ರಚಿಸುವುದು ಇತ್ತೀಚಿನ ದಿನಗಳಲ್ಲಿ ವೈರಲ್ ಆಗಲು ಸುಲಭವಾದ ಮಾರ್ಗವಾಗಿದೆ. ಓದುಗರು ವರ್ಚುವಲ್ ಜಗತ್ತಿನಲ್ಲಿ ಸುರಕ್ಷಿತವಾಗಿರಲು ಸಹ ಜಾಗರೂಕರಾಗಿರಬೇಕು. ಈ ಸುದ್ದಿಗೆ ಸಂಬಂಧಿಸಿದ ಯಾವುದೇ ಲಿಂಕ್‌ಗಳು ನಿಜ ಅಥವಾ ವಿಶ್ವಾಸಾರ್ಹವಲ್ಲ ಎಂದು ಪ್ರಿಯಾಂಕಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಆಕ್ಷನ್-ಥ್ರಿಲ್ಲರ್ ಚಿತ್ರ 'ಹೆಡ್ಸ್ ಆಫ್ ಸ್ಟೇಟ್'ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇದ್ರಿಸ್ ಎಲ್ಬಾ, ಜಾನ್ ಸೆನಾ, ಕಾರ್ಲಾ ಗುಗಿನೋ, ಜ್ಯಾಕ್ ಕ್ವೈಡ್, ಸ್ಟೀಫನ್ ರೂಟ್, ಸಾರಾ ನೈಲ್ಸ್, ರಿಚರ್ಡ್ ಕೊಯ್ಲ್, ಪ್ಯಾಡಿ ಕಾನ್ಸಿಡೈನ್ ಮತ್ತು ಇತರರು ಸೇರಿದಂತೆ ದೊಡ್ಡ ತಾರಾಬಳಗವಿದೆ. 'ದಿ ಸುಸೈಡ್ ಸ್ಕ್ವಾಡ್' ನಂತರ ಜಾನ್ ಸೆನಾ ಮತ್ತು ಇದ್ರಿಸ್ ಎಲ್ಬಾ ಮತ್ತೆ ಒಂದಾಗುತ್ತಿರುವ ಚಿತ್ರ ಇದಾಗಿದೆ. (ಏಜೆನ್ಸೀಸ್​)