ಸಿನಿವಾಣಿ

ಪ್ರವೀರ್, ಐಶ್ವರ್ಯಾ ಎಂಗೇಜ್ಮೆಂಟ್ ; ‘ಸೈರನ್’ ಬಳಿಕ ನಿಶ್ಚಿತಾರ್ಥಕ್ಕೆ ರೆಡಿಯಾದ ಪ್ರವೀಣ್ ಶೆಟ್ಟಿ ಪುತ್ರ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕಳೆದ ಮೇನಲ್ಲಿ ರಿಲೀಸ್ ಆದ ‘ಸೈರನ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪದಾರ್ಪಣೆ ಮಾಡಿದ ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿ, ಇದೀಗ ಮತ್ತೊಂದು ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಹೆಸರು ‘ಎಂಗೇಜ್ಮೆಂಟ್’. ಇಲ್ಲಿ ಪ್ರವೀರ್‌ಗೆ ‘ಜಾಗ್ವಾರ್’ ಮತ್ತು ‘ಪ್ರವೀಣ’ ಚಿತ್ರಗಳಲ್ಲಿ ನಟಿಸಿದ್ದ ಐಶ್ವರ್ಯಾ ಗೌಡ ನಾಯಕಿಯಾಗಿದ್ದಾರೆ.

‘ರೇವ್ ಪಾರ್ಟಿ’ ಸೇರಿ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ರಾಜು ಬೋನಗಾನಿಗೆ ‘ಎಂಗೇಜ್ಮೆಂಟ್’ ನಾಲ್ಕನೇ ಪ್ರಯತ್ನ. ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಕೊಡಗು, ಮೈಸೂರು, ಗೋವಾ ಸೇರಿ ಹಲವು ಸುಂದರ ತಾಣಗಳಲ್ಲಿ 40 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಇದೊಂದು ರೊಮ್ಯಾಂಟಿಕ್ ಲವ್‌ಸ್ಟೋರಿ ಕಥೆಯಾಗಿದ್ದು, ಕನ್ನಡ ಸೇರಿ ಏಳು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಐಡಿಯಾ ಚಿತ್ರತಂಡದ್ದು.

ಚಿತ್ರದಲ್ಲಿ ಐದು ಹಾಡುಗಳಿದ್ದು ದಿಲೀಪ್ ಭಂಡಾರಿ ಹಾಗೂ ರಜತ್ ೋಶ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ವೆಂಕಟ್ ಮನಂ ಛಾಯಾಗ್ರಹಣ, ರವಿ ಕೊಂಡವೀಟಿ ಸಂಕಲನವಿರಲಿದೆ. ಪ್ರವೀರ್, ಐಶ್ವರ್ಯಾ ಜತೆ ರಾಜಗೋಪಾಲ್, ಬಾಲರಾಜವಾಡಿ, ಭಾವನಾ, ರಜಿನಿಶ್ರೀನಿ, ಶರದ್ ವರ್ಮ, ದೀಪ್ತಿ ಗುಪ್ತ, ಸುಜಯ್ ರಾವ್ ಪ್ರಮುಖ ತಾರಾಗಣದಲ್ಲಿದ್ದಾರೆ.