ನವದೆಹಲಿ: ಬಾಲಿವುಡ್ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿರುವ ನಟಿ ಕಂಗನಾ ರಣಾವತ್ರನ್ನು ನಟ ಹಾಗೂ ರಾಜಕಾರಣಿ ಪ್ರಕಾಶ್ ರಾಜ್ ಮೀಮ್ಸ್ ಮೂಲಕ ಕಾಲೆಳೆದಿದ್ದಾರೆ.
ಐತಿಹಾಸಿಕ ಪಾತ್ರಗಳನ್ನು ಮಾಡಿರುವ ಬಾಲಿವುಡ್ ಕಲಾವಿದರ ಚಿತ್ರಗಳನ್ನೊಳಗೊಂಡ ಮೀಮ್ಸ್ ಪೋಸ್ಟ್ ಮಾಡಿ, ತಾನು ಮಾಡಿದ ಒಂದು ಐತಿಹಾಸಿಕ ಚಿತ್ರ (ಮಣಿಕಾರ್ಣಿಕ) ದಿಂದ ತಾನೋರ್ವ ಲಕ್ಷ್ಮೀಬಾಯಿ ಎಂದು ಕಂಗನಾ ಭಾವಿಸಿಕೊಂಡರೆ, ಹಾಗಾದ್ರೆ ದೀಪಿಕಾಳ ಪದ್ಮಾವತಿ, ಹೃತಿಕ್ ಅವರ ಅಕ್ಬರ್, ಶಾರೂಕ್ ಅವರ ಅಶೋಕ, ಅಜಯ್ ದೇವಗನ್ ಅವರ ಭಗತ್ ಸಿಂಗ್, ಆಮೀರ್ ಖಾನ್ ಅವರ ಮಂಗಲ ಪಾಂಡೆ ಮತ್ತು ವಿವೇಕ್ ಅವರ ಮೋದಿ ಜಿ... ಏನು? ಜಸ್ಟ್ ಆ್ಯಸ್ಕಿಂಗ್ ಎಂದು ಬರೆದು ಮೀಮ್ಸ್ ಮೂಲಕ ಪ್ರಕಾಶ್ ರಾಜ್ ಕಂಗನಾರನ್ನು ಕಿಚಾಯಿಸಿದ್ದಾರೆ.
ಬಾಲಿವುಡ್ ಮಾಫಿಯಾ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಸಮರಕ್ಕೆ ನಿಂತಿರುವ ಕಂಗನಾಳನ್ನು ಕೆಲ ನೆಟ್ಟಿಗರು ಮಣಿಕಾರ್ಣಿಕ ಚಿತ್ರದ ರಾಣಿ ಲಕ್ಷ್ಮಿ ಭಾಯಿ ಪಾತ್ರಕ್ಕೆ ಹೋಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕಾಶ್ ರಾಜ್ ಮೀಮ್ಸ್ ಮೂಲಕ ವ್ಯಂಗ್ಯವಾಡಿದ್ದಾರೆ.
ಕಳೆದ ಬುಧವಾರವಷ್ಟೇ ಮುಂಬೈ ಮಹಾನಗರ ಪಾಲಿಕೆ ಬಾಂದ್ರಾದಲ್ಲಿರುವ ಕಂಗಾನ ಕಚೇರಿಯ ಒಂದು ಭಾಗವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹೇಳಿ ನೆಲಸಮ ಮಾಡಿದೆ. ಬಾಲಿವುಡ್ ವಿರುದ್ಧ ಮಾತನಾಡಿರುವುದಲ್ಲದೆ, ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಂಗನಾ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಹಾಗೂ ಬಾಲಿವುಡ್ ವಿರುದ್ಧ ನಿರಂತರವಾಗಿ ಮಾತನಾಡುತ್ತಿರುವ ಕಂಗನಾಗೆ ಜಾಲತಾಣದಲ್ಲಿ ಪರ-ವಿರೋಧ ವ್ಯಕ್ತವಾಗಿದೆ. (ಏಜೆನ್ಸೀಸ್)