ಸಿನಿವಾಣಿ

ಪುನೀತ್ ಹೆಸರಲ್ಲಿ ಪ್ರಕಾಶ್ ರಾಜ್ ಮಾಡುತ್ತಿರುವುದೇನು?

ನಟ ಪ್ರಕಾಶ್ ರಾಜ್‌ ಅವರು ತಮ್ಮ ಅಭಿನಯದ ಜೊತೆಗೆ ಸಮಾಜದಲ್ಲಿ ನಡೆಯುವ ಹಲವು ಬೆಳವಣಿಗೆಗಳ ಬಗ್ಗೆ ಆಗಾಗ ಧ್ವನಿ ಎತ್ತುತ್ತಾರೆ. ಮಾಧ್ಯಮಗಳಲ್ಲಿ ಅಥವಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಹೆದರಿಕೆ ಇಲ್ಲದೆ ಸರ್ಕಾರಗಳನ್ನು ಬಿಡದೆ ಪ್ರಶ್ನಿಸುತ್ತಾರೆ. ಇನ್ನು, ಹಲವು ಬಾರಿ ಅವರ ಹೇಳಿಕೆಗಳು ಅವರನ್ನು ವಿವಾದಕ್ಕೆ ತಳ್ಳಿದ್ದು ಇದೆ. ಆದರೆ, ಈ ಬಾರಿ ಪ್ರಕಾಶ್ ರಾಜ್‌ ಮಾಡಿರುವ ಒಂದು ಟ್ವೀಟ್ ಅವರನ್ನು ಮುಜುಗರಕ್ಕೆ ತಳ್ಳದೆ ಬದಲಿಗೆ ಎಲ್ಲರ ಮೆಚ್ಚುಗೆ ಗಳಿಸುತ್ತಿದೆ. ಇದಕ್ಕೆ ಕಾರಣ, ಪ್ರಕಾಶ್ ಅವರು ಈ ಬಾರಿ ಪುನೀತ್‌ ರಾಜ್‌ಕುಮಾರ್ ಅವರನ್ನು ಕುರಿತು ಟ್ವೀಟ್ ಮಾಡಿದ್ದಾರೆ. ಹೌದು, ಪ್ರಕಾಶ್ ರಾಜ್‌ ಅವರು ಮಾರ್ಚ್ 26 ರಂದು ಅವರ 57 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಹಾಗಾಗಿ, ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಪ್ರಕಾಶ್ ಒಂದು ಉತ್ತಮವಾದ ವಿಚಾರವನ್ನು ಕೈಗೆತ್ತಿಕೊಂಡಿದ್ದು, ಅಪ್ಪು ಹೆಸರಲ್ಲಿ ಪ್ರಕಾಶ್ ರಾಜ್ ಹೊಸ ಯೋಜನೆ ಒಂದನ್ನು ಆರಂಭಸಿದ್ದಾರೆ. ಅಂದಹಾಗೆ, 'ಅಪ್ಪು ಎಕ್ಸ್‌ಪ್ರೆಸ್' ಎನ್ನುವ ಹೊಸ ಯೋಜನೆಯನ್ನು ಆರಂಭ ಮಾಡಿದ್ದಾರೆ ನಟ ಪ್ರಕಾಶ್ ರಾಜ್. ತಮ್ಮದೇ ಫೌಂಡೇಷನ್ ಮೂಲಕ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಪ್ರಕಾಶ್, ಈಗ ಕರುನಾಡ ಪ್ರೀತಿಯ ಅಪ್ಪು ಅವರ ಹೆಸರಿನಲ್ಲಿ ಮತ್ತೊಂದು ಯೋಜನೆ ಶುರು ಮಾಡಿದ್ದಾರೆ. 'ಅಪ್ಪು ಎಕ್ಸ್‌ಪ್ರೆಸ್' ಎಂಬ ಯೋಜನೆ ಆರಂಭ ಮಾಡಿರುವ ನಟ ಪ್ರಕಾಶ್ ರಾಜ್, ಆ ಯೋಜನೆಯ ಬಗ್ಗೆ ಹೆಚ್ಚು ಮಾಹಿತಿ ಮಾತ್ರ ಅವರ ಟ್ವೀಟ್​ನಲ್ಲಿ ತಿಳಿಸಿಲ್ಲ. ನಟನ ಟ್ವೀಟ್ ತಡವಾಗಿ ಈಗ ಸಖತ್ ವೈರಲ್ ಆಗುತ್ತಿದೆ.
ಪ್ರಕಾಶ್ ರಾಜ್ ಅವರು, "ನನ್ನ ದಿನವಾದ ಈ ದಿನದಂದು, ಈ ಸುದ್ದಿಯನ್ನು ಹಂಚಿಕೊಳ್ಳಲು ಸಂತಸ ಪಡುತ್ತೇನೆ. ಪ್ರಕಾಶ್ ರಾಜ್ ನೇತೃತ್ವದಲ್ಲಿ 'ಹಿಂದಿರುಗಿಸೋಣ'', ಎಂದು ಬರೆದುಕೊಂಡು 'ಅಪ್ಪು ಎಕ್ಸ್‌ಪ್ರೆಸ್' ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ, ಒಂದು ಟ್ವೀಟ್​ನ ಹೊರತು ಪ್ರಕಾಶ್ ಬೇರೆ ಏನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಎಲ್ಲರಿಗೂ ಗೊತ್ತಿರುವ ಹಾಗೆ, ಪುನೀತ್‌ ಅವರ ಜೊತೆಗೆ ನಟ ಪ್ರಕಾಶ್ ರಾಜ್ ಅವರು ಸಾಕಷ್ಟು ಸಿನಿಮಾಗಳಲ್ಲಿ ತೆರೆಹಂಚಿಕೊಂಡಿದ್ದಾರೆ. ಪ್ರಕಾಶ್ ರಾಜ್‌ ಸದ್ಯ 'ಅಪ್ಪು ಎಕ್ಸ್‌ಪ್ರೆಸ್' ಎನ್ನುವ ಯೋಜನೆಯನ್ನು ಕೈಗೊಂಡಿರುವುದಾಗಿ ಮಾತ್ರ ಹೇಳಿಕೊಂಡಿದ್ದು, ಇನ್ನು ಈ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿವೆ.