ಹೈದರಾಬಾದ್: ಪ್ರಭಾಸ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಎರಡು ವರ್ಷಗಳಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಮುಂದಿನ ನಾಲ್ಕೈದು ತಿಂಗಳ ಕಾಲ ಬಿಡುಡೆಯಾಗುವುದು ಸಹ ಸಂಶಯ ಎನ್ನುವಂತಿದೆ. ಈಗಾಗಲೇ, ಪ್ರಭಾಸ್ ಅಭಿನಯದ ಮೂರು ಚಿತ್ರಗಳು ಚಿತ್ರೀಕರಣ ಪ್ರಾರಂಭಿಸಿವೆ. 'ಸಲಾರ್', 'ಆದಿಪುರುಷ್' ಮತ್ತು 'ರಾಧೇ ಶ್ಯಾಮ್' ಚಿತ್ರಗಳ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿವೆ. ಇದರ ಜತೆಗೆ, ಶನಿವಾರ 'ಪ್ರಾಜೆಕ್ಟ್ ಕೆ' ಎನ್ನುವ ಹೊಸ ಸಿನಿಮಾ ಸಹ ಸೆಟ್ಟೇರಿದೆ.
ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ ಮುಂತಾದವರ ಅಭಿನಯದ ಹೊಸ ಚಿತ್ರವೊಂದನ್ನು 'ಮಹಾನಟಿ' ಖ್ಯಾತಿಯ ನಾಗ್ಅಶ್ವಿನ್ ನಿರ್ದೇಶಿಸಲಿದ್ದಾರೆ ಮತ್ತು ವೈಜಯಂತಿ ಮೂವೀಸ್ನ ಅಶ್ವಿನಿ ದತ್ ನಿರ್ಮಾಣ ಮಾಡುತ್ತಿದ್ದಾರೆ ಎಂಬುದು ಕಳೆದ ವರ್ಷದ ಸುದ್ದಿ. ವೈಜಯಂತಿ ಮೂವೀಸ್ ನಿರ್ಮಾಣದ 50ನೇ ಚಿತ್ರ ಇದಾಗಿದ್ದು, ದೇಶದ 400 ಕೋಟಿ ರೂ.ಗಳಿಗೂ ಹೆಚ್ಚು ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ. ಈ ಸೈಂಟಿಫಿಕ್ ಚಿತ್ರ ಶನಿವಾರ, ಗುರು ಪೌರ್ಣಮಿ ಅಂಗವಾಗಿ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಪ್ರಾರಂಭವಾಗಿದೆ.
ಅಮಿತಾಭ್ ಬಚ್ಚನ್ ಅಭಿನಯದ ಮೊದಲ ದೃಶ್ಯಕ್ಕೆ ಪ್ರಭಾಸ್ ಕ್ಲಾಪ್ ಮಾಡಿದ್ದಾರೆ. ಕ್ಲಾಪ್ಬೋರ್ಡ್ ಹಿಡಿದಿರುವ ಫೋಟೋವೊಂದನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿರುವ ಪ್ರಭಾಸ್, 'ಈ ಗುರುಪೌರ್ಣಿಮೆ ಸಂದರ್ಭದಲ್ಲಿ, ಭಾರತೀಯ ಚಿತ್ರರಂಗದ ಗುರುವಾದ ಅಮಿತಾಭ್ ಬಚ್ಚನ್ ಅಭಿನಯದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುತ್ತಿರುವುದು ಹೆಮ್ಮೆಯಾಗುತ್ತಿದೆ' ಎಂದು ಹೇಳಿಕೊಂಡಿದ್ದಾರೆ. ಅಮಿತಾಭ್ ಅಭಿನಯದ ಹಲವು ಪ್ರಮುಖ ದೃಶ್ಯಗಳನ್ನು ಈ ಹಂತದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.
ಚಿತ್ರಕ್ಕೆ ಸದ್ಯಕ್ಕೆ ಹೆಸರಿಟ್ಟಿಲ್ಲ. ಸದ್ಯಕ್ಕೆ, 'ಪ್ರಾಜೆಕ್ಟ್ ಕೆ' ಎಂಬ ಹೆಸರನ್ನು ಇಡಲಾಗಿದ್ದು, ಅದೇ ಹೆಸರಿನಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರದ ನಿಜವಾದ ಹೆಸರನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗಿದೆ. ಐದು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು, ಸದ್ಯದಲ್ಲೇ ಪ್ರಭಾಸ್ ಸಹ ಬಂದು ಚಿತ್ರತಂಡ ಸೇರಿಕೊಳ್ಳಲಿದ್ದಾರೆ.