ಪೂಜಾ ಹೆಗ್ಡೆ ಬಾಲಿವುಡ್ ಜತೆ ತೆಲುಗು, ತಮಿಳಿನಲ್ಲೂ ಬಿಜಿ ನಟಿ.ಆದರೆ, ಇತ್ತೀಚಿನ ದಿನಗಳಲ್ಲಿ ಅವರು ನಟಿಸಿದ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಹೆಚ್ಚು ಸದ್ದು ಮಾಡುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ತಮಿಳಿನ ‘ಬೀಸ್ಟ್’ ಹೊರತುಪಡಿಸಿ, ‘ಮೋಸ್ಟ್ ಎಲಿಜಬಲ್ ಬ್ಯಾಚುಲರ್’, ‘ರಾಧೇಶ್ಯಾಮ್’, ‘ಆಚಾರ್ಯ’, ‘ಸರ್ಕಸ್’, ‘ಕಿಸೀ ಕಾ ಭಾಯ್, ಕಿಸೀ ಕಿ ಜಾನ್’ ಚಿತ್ರಗಳು ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿವೆ.
ನಿರ್ದೇಶಕ ತ್ರಿವಿಕ್ರಮ್ ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಗುಂಟೂರು ಕಾರಂ’ ತಂಡದಿಂದ ಗೇಟ್‌ಪಾಸ್ ನೀಡಲು ಪೂಜಾ ಸಾಲು ಸಾಲು ಸೋಲುಗಳೇ ಕಾರಣ ಎಂಬ ಮಾತು ಕೂಡ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಅದರ ನಡುವೆಯೇ ಪೂಜಾ ಹೊಸ ಬಾಲಿವುಡ್ ಸಿನಿಮಾ ಘೋಷಣೆಯಾಗಿದೆ.
ಚಿತ್ರದ ಹೆಸರು ‘ದೇವ’. ‘ಸಲ್ಯೂಟ್’ ಖ್ಯಾತಿಯ ಮಲಯಾಳಂ ನಿರ್ದೇಶನ ರೋಷನ್ ಆ್ಯಂಡ್ರ್ಯೂಸ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದು, ಶಾಹಿದ್ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಶಾಹಿದ್‌ಗೆ ಪೂಜಾ ಜೋಡಿಯಾಗಿದ್ದಾರೆ. ಸಿನಿಮಾ 2024ರ ಅ. 11ರಂದು ಬಿಡುಗಡೆಯಾಗಲಿದೆ.