ಪೂಜಾ ಹೆಗ್ಡೆ ಸಿನಿಮಾ ಬತ್ತಳಿಕೆಯಲ್ಲಿ ದೊಡ್ಡ ಬಜೆಟ್ನ ಚಿತ್ರಗಳ ಪಾಲೇ ಹೆಚ್ಚು. ‘ರಾಧೆ ಶ್ಯಾಮ್, ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’, ‘ಬೀಸ್ಟ್’, ‘ಸರ್ಕಸ್’, ‘ಭಾಯಿಜಾನ್’, ‘ಆಚಾರ್ಯ’... ಹೀಗೆ ಅವರ ಸಿನಿಮಾ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲ ಸಿನಿಮಾಗಳ ಪೈಕಿ ಮೂರು ಚಿತ್ರಗಳು ಸಂಕ್ರಾಂತಿಗೆ ತೆರೆಕಾಣಲಿರುವುದು ವಿಶೇಷ. ಆ ಒಂದು ಕಾರಣಕ್ಕೆ ಅವರೀಗ ಸಂಕ್ರಾಂತಿ ಕ್ವೀನ್ ಪಟ್ಟ ಅಲಂಕರಿಸಿದ್ದಾರೆ!
ಕಳೆದ ವರ್ಷದ ಸಂಕ್ರಾಂತಿ ವೇಳೆ ಅಲ್ಲು ಅರ್ಜುನ್ ಜತೆಗೆ ‘ಅಲಾ ವೈಕುಂಠಪುರಂಲೋ’ ಸಿನಿಮಾ ಮೂಲಕ ಪೂಜಾ ಬ್ಲಾಕ್ಬಸ್ಟರ್ ಲಿಸ್ಟ್ಗೆ ಸೇರಿದ್ದರು. ಈ ವರ್ಷ ಕರೊನಾ ಹಿನ್ನೆಲೆಯಲ್ಲಿ ಅವರ ಬೇರಾವ ಸಿನಿಮಾ ಬಿಡುಗಡೆ ಆಗಲಿಲ್ಲ. ಹೀಗಿರುವಾಗಲೇ 2022ರ ಸಂಕ್ರಾಂತಿ ಬಿಡುಗಡೆ ಪಟ್ಟಿ ಹೊರಬಂದಿದೆ. ಪ್ರಭಾಸ್ ‘ರಾಧೆ ಶ್ಯಾಮ್ ಸಂಕ್ರಾಂತಿಗೆ ಬರುವುದು ಅಧಿಕೃತವಾಗಿದೆ. ಇತ್ತ ಅಖಿಲ್ ಅಭಿನಯದ ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್’ ಚಿತ್ರ ಮತ್ತು ವಿಜಯ್ ಜತೆಗಿನ ತಮಿಳಿನ ‘ಬೀಸ್ಟ್’ ಸಹ ಸಂಕ್ರಾಂತಿಗೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಅಂದುಕೊಂಡಂತೆ ಆವತ್ತೇ ಬಿಡುಗಡೆ ಆದರೆ, ಪೂಜಾ ಪಾಲಿಗಿದು ವಿಶೇಷ ದಿನವಾಗಲಿದೆ.